

ಬೆಂಗಳೂರು: ರಾಜ್ಯದಲ್ಲಿ ಗೋವುಗಳ ಸಂರಕ್ಷಣೆಗೆ ಸಂಚಾರಿ ಚಿಕಿತ್ಸಾಲಯ ಆರಂಭಿಸಲಾಗುವುದು. ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳು ಮಂಜೂರಾಗಿವೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಾಹಿತಿ ನೀಡಿದರು.
ವಿಕಾಸಸೌಧದಲ್ಲಿ ಬುಧವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ತಾಲೂಕುಗಳಿಗೆ 275 ಸಂಚಾರಿ ಪಶು ಚಿಕಿತ್ಸಾಲಯಗಳು ಮಂಜೂರಾಗಿದ್ದು, ಒಂದು ವಾಹನಕ್ಕೆ 16 ಲಕ್ಷ ರೂ ವೆಚ್ಚವಾಗಲಿದೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಈ ವಾಹನಗಳನ್ನು ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಸಂಚಾರಿ ಚಿಕಿತ್ಸಾಲಯ ವಾಹನಗಳ ನಿರ್ವಹಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಅನುದಾನ ಭರಿಸಲಿವೆ. ಪಶುಸಂಜೀವಿನಿ ಸಂಚಾರಿ ಚಿಕಿತ್ಸಾಲಯವನ್ನು ಇಡೀ ದೇಶದಲ್ಲಿ ಆರಂಭಿಸುವ ಭರವಸೆಯನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ನೀಡಿದ್ದಾರೆ ಎಂದು ಪ್ರಭು ಚವ್ಹಾಣ್ ಹೇಳಿದರು
.
ಪಶು ಸಹಾಯವಾಣಿ 1962 ಗೆ ರೈತರು ಕರೆ ಮಾಡಿದರೆ ಮನೆ ಮುಂದೆ ವಾಹನ ಬರುತ್ತದೆ. ಈವರೆಗೆ ಸಹಾಯವಾಣಿ ಕೇಂದ್ರಕ್ಕೆ 25,000 ಕರೆಗಳು ಬಂದಿವೆ. ಕಾಲುಬಾಯಿ ರೋಗಕ್ಕೆ 50 ಲಕ್ಷ ಲಸಿಕೆ ಡೋಸ್ ನೀಡಲಾಗಿದೆ ಎಂದರು.
ಕಟ್ಟುನಿಟ್ಟಿನ ನಿಷೇಧ
ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಕಟ್ಟುನಿಟ್ಟಿನ ಕ್ರಮವಹಿಸುವ ಜತೆಗೆ ಜನರಲ್ಲೂ ಜಾಗೃತಿ ಮೂಡಿಸಿ, ಗೋವು ಸಂಪತ್ತು ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಗೋಹತ್ಯೆ ನಿಷೇಧ ಕಾನೂನು ಅನುಷ್ಠಾನಕ್ಕೆ ಬಂದ ಬಳಿಕ 400 ಎಫ್ ಐ ಆರ್ ದಾಖಲಾಗಿದ್ದು, ಕಾಯ್ದೆ ಜಾರಿ ಬಳಿಕ ಗೋವುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಪ್ರಭು ಚವ್ಹಾಣ್ ತಿಳಿಸಿದರು.