

ಶಿವಮೊಗ್ಗ: ಗದ್ದೆಗೆ ಬಂದು ಗೆದ್ದೆ ಎಂಬ ಖುಷಿಯಲ್ಲಿದ್ದ ಈ ಸೋಂಕಿತ ವ್ಯಕ್ತಿಗೆ ಮತ್ತದೇ ಆಸ್ಪತ್ರೆಗೆ ಬಂದು ಬಿದ್ದೆ ಎಂಬಂಥ ಪರಿಸ್ಥಿತಿ. ಕರೊನಾ ಸೋಂಕಿತರೊಬ್ಬರು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಭತ್ತದ ಗದ್ದೆಯಲ್ಲಿ ಅವಿತು ಕೂತಿದ್ದು, ಅವರನ್ನು ಪತ್ತೆ ಹಚ್ಚಿ ಮತ್ತದೇ ಆಸ್ಪತ್ರೆಗೆ ಕರೆ ತರಲಾಗಿದೆ.
ಶಿವಮೊಗ್ಗದ ಎನ್.ಎಚ್. ಆಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಈ ಮೂಲಕ ಗಮನ ಸೆಳೆದ ಕರೊನಾ ಸೋಂಕಿತ ವ್ಯಕ್ತಿಯ ಹೆಸರು ಹರೀಶ್ ಲಾಲ್. ಗಾಂಧಿಬಜಾರ್ನ ನಿವಾಸಿಯಾಗಿರುವ 48 ವರ್ಷದ ಈ ವ್ಯಕ್ತಿ ಕೋವಿಡ್-19 ಸೋಂಕಿಗೆ ಒಳಗಾದ್ದರಿಂದ ಎನ್.ಎಚ್. ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಕೆಲಬಾರಿ ಯತ್ನಿಸಿದ್ದ ಈ ವ್ಯಕ್ತಿ ಕೊನೆಗೂ ಅದರಲ್ಲಿ ಯಶಸ್ವಿ ಆಗಿದ್ದರು. ಆಸ್ಪತ್ರೆಯಿಂದ ಪರಾರಿಯಾಗಿ ಅದರ ಎದುರಿಗಿದ್ದ ಭತ್ತದ ಗದ್ದೆಯಲ್ಲಿ ಅವಿತುಕೊಂಡಿದ್ದರು. ಸೋಂಕಿತ ವ್ಯಕ್ತಿಯ ನಾಪತ್ತೆ ಪ್ರಕರಣದಿಂದ ಆಸ್ಪತ್ರೆ ಸಿಬ್ಬಂದಿ ಕೆಲಕಾಲ ತಲೆಕೆಡಿಸಿಕೊಳ್ಳುವಂತಾಗಿತ್ತು.
ನಂತರ ಆಸ್ಪತ್ರೆ ಸಿಬ್ಬಂದಿ ಇವರನ್ನು ಪತ್ತೆ ಮಾಡಿ, ಭತ್ತದ ಗದ್ದೆಯಿಂದ ಕರೆದುಕೊಂಡು ಬಂದು ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟಕ್ಕೂ ಕರೊನಾ ಸೋಂಕಿತ ಈ ವ್ಯಕ್ತಿ ಕೋವಿಡ್ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದೇಕೆ ಎಂಬುದು ಇದೀಗ ಸ್ಥಳೀಯರ ಕುತೂಹಲ ಕೆರಳಿಸಿದೆ.