ಆರ್​ಟಿಒ ಕಚೇರಿಯಲ್ಲಿ ಭ್ರಷ್ಟಾಚಾರ; ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿದ ದಲ್ಲಾಳಿಗಳು..

crime
Published on

ಕೋಲಾರ: ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್​ಟಿಒ) ಕಚೇರಿಯಲ್ಲಿನ ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ದಲ್ಲಾಳಿಗಳು ಹಲ್ಲೆ ಮಾಡಿದ ಪ್ರಸಂಗವೊಂದು ನಡೆದಿದೆ. ಈ ಮೂಲಕ ಕೆಆರ್​ಎಸ್​ ಪಕ್ಷದ ಕಾರ್ಯಕರ್ತರ ಮೇಲೆ ಮತ್ತೊಂದು ಹಲ್ಲೆ ನಡೆದಂತಾಗಿದೆ.

ಕೋಲಾರದ ಆರ್​ಟಿಒ ಕಚೇರಿಯಲ್ಲಿ ಇಂದು ಈ ಹಲ್ಲೆ ಪ್ರಕರಣ ನಡೆದಿದೆ. ಭ್ರಷ್ಟಾಚಾರ ಪ್ರಶ್ನಿಸಿದ ಕೆಆರ್​ಎಸ್​ ಪಕ್ಷದ ಕಾರ್ಯಕರ್ತರ ಮೇಲೆ ಅಲ್ಲಿದ್ದ ಡ್ರೈವಿಂಗ್ ಸ್ಕೂಲ್ ದಲ್ಲಾಳಿಗಳು ಹಲ್ಲೆ ಮಾಡಿದ್ದಾರೆ. ಕೆಆರ್​ಎಸ್​ ಪಕ್ಷದ ಮುಳಬಾಗಿಲು ಯುವಘಟಕ ಅಧ್ಯಕ್ಷ ಗಣೇಶ್​, ಆನಂದ್, ಮಹೇಶ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಮಾತ್ರವಲ್ಲದೆ ಜಿಲ್ಲಾಧ್ಯಕ್ಷೆ ಇಂದಿರಾ ರೆಡ್ಡಿ ಮೇಲೂ ಹಲ್ಲೆಗೆ ಮುಂದಾಗಿದ್ದರು.

ಆರ್​ಟಿಒ ಕಚೇರಿಯಲ್ಲಿ ನಡೆಯುತ್ತಿದ್ದ ಅನ್ಯಾಯದ ವಿರುದ್ದ ಪ್ರಶ್ನೆ ಮಾಡಿದ್ದಲ್ಲದೆ, ಅದನ್ನು ವಿಡಿಯೋ ಮಾಡಿದ್ದಕ್ಕೆ ಸಿಟ್ಟಾದ ದಲ್ಲಾಳಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ.

ಇತ್ತೀಚೆಗೆ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿ ಕಾನೂನುಬಾಹಿರವಾಗಿ ಸಚಿವ ವಿ.ಸೋಮಣ್ಣ ಅವರ ಬೃಹತ್ ಫ್ಲೆಕ್ಸ್ ಹಾಕಿದ್ದನ್ನು ಪ್ರಶ್ನಿಸಿದ್ದಾಗಲೂ ಸೋಮಣ್ಣ ಬೆಂಬಲಿಗರು ಕೆಆರ್​ಎಸ್ ಪಕ್ಷದವರ ಮೇಲೆ ಹಲ್ಲೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net