

ಧಾರವಾಡ: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಈಗಲೇ ಕಾರ್ಯತಂತ್ರಗಳನ್ನು ರೂಪಿಸಿ ಸಜ್ಜಾಗುತ್ತಿದ್ದರೆ, ಇಲ್ಲೊಂದು ಕಡೆ ನಕಲಿ ಮತದಾರರ ಚೀಟಿಗಳನ್ನೇ ತಯಾರಿಸುವಂಥ ಕೆಲಸವೂ ನಡೆದಿದೆ.
ಧಾರವಾಡದ ಜೆರಾಕ್ಸ್ ಅಂಗಡಿಯೊಂದರಲ್ಲಿ ಹೀಗೆ ನಕಲಿ ವೋಟರ್ ಐಡಿಗಳನ್ನು ತಯಾರಿಸುತ್ತಿರುವುದು ಪತ್ತೆಯಾಗಿದ್ದು, ಸೈಬರ್ ಕ್ರೈಂ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಧಾರವಾಡದ ಅಂಜುಮಾನ್ ಕಾಂಪ್ಲೆಕ್ಸ್ನಲ್ಲಿರುವ ಎಂಜೆಆರ್ ಜೆರಾಕ್ಸ್ ಅಂಗಡಿಯಲ್ಲಿ ಈ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದ್ದು, ಅಂಗಡಿಯ ಮಹಮ್ಮದ್ ಅಲಿ ಎಂಬಾತನನ್ನು ಬಂಧಿಸಲಾಗಿದೆ.
ಈತ ಚುನಾವಣಾ ಆಯೋಗದ ವೆಬ್ಸೈಟ್ ದುರ್ಬಳಕೆ ಮಾಡಿಕೊಂಡು ಅನಧಿಕೃತವಾಗಿ ಮತದಾರರ ಗುರುತು ಚೀಟಿಗಳನ್ನು ತಯಾರಿಸುತ್ತಿದ್ದ. ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸುವ ಜತೆಗೆ ಈ ಕೃತ್ಯಕ್ಕೆ ಬಳಸುತ್ತಿದ್ದ ಪ್ರಿಂಟರ್ ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.