ರಾಜ್ಯದಲ್ಲಿ ಎಂಟು ಜನರಿಂದಲೇ ಹರಡಿದೆ ಶೇ.40 ಕರೊನಾ: ಪ್ರತಿಯೊಬ್ಬರ ಎಚ್ಚರಿಕೆಯೂ ಅವಶ್ಯಕ

covid paint
Published on

ಬೆಂಗಳೂರು: ರಾಜ್ಯದಲ್ಲಿ ಇಲ್ಲಿಯವರೆಗೆ ಹರಡಿರುವ ಕರೊನಾ ಸೋಂಕಿನಲ್ಲಿ ಶೇ.40 ಕೇವಲ 8 ಜನರಿಂದ ಹರಡಿದೆ. ಭಾನುವಾರದವರೆಗೆ ರಾಜ್ಯದಲ್ಲಿ 635 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 293 ಸೋಂಕಿತರು ಗುಣಮುಖ ಆಗಿದ್ದಾರೆ.

ನಂಜನಗೂಡಿನ ಔಷಧ ಕಂಪನಿ ಉದ್ಯೋಗಿಯೊಬ್ಬರಿಂದಲೇ 76 ಜನರಿಗೆ ಸೋಂಕು ಹರಡಿದ್ದು, ರಾಜ್ಯದಲ್ಲಿ ಅತಿಹೆಚ್ಚು ಜನರಿಗೆ ಹರಡಿದವರಾಗಿದ್ದಾರೆ. ತಬ್ಲಿಘಿ ಜಮಾತ್​ಗೆ ಹೋಗಿ ಬಂದ ವ್ಯಕ್ತಿ, ಬೆಂಗಳೂರಿನಲ್ಲಿ ನೆಲೆಸಿದ್ದ ಬಿಹಾರ ಮೂಲದ ಕಾರ್ವಿುಕ ಸೇರಿ 8 ಜನರಿಂದ 226 ಜನರಲ್ಲಿ ಸೋಂಕು ಹರಡಿದೆ ಎಂಬುದು ರಾಜ್ಯ ಸರ್ಕಾರದ ಅಂಕಿ-ಅಂಶಗಳಲ್ಲಿ ದೃಢಪಟ್ಟಿದೆ. ಆಯಾ ಪ್ರದೇಶದಲ್ಲಿ ವೈದ್ಯಕೀಯ ವ್ಯವಸ್ಥೆ ಮೇಲೆ ಇವರಿಂದ ಆದ ತೀವ್ರ ಪರಿಣಾಮ ಗಮನಿಸಿರುವ ಅಧಿಕಾರಿಗಳು, ಅಂತಹ ಸೂಪರ್ ಸ್ಪ್ರೆಡರ್​ಗಳು ಮತ್ತೆ ಕಾಣಿಸಿಕೊಳ್ಳದಿರಲಿ ಎಂದು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ.

ಸೋಂಕು ಹರಡಿದವರನ್ನು ದೂಷಣೆ ಮಾಡುವುದು ಸರಿಯಲ್ಲ. ಸೋಂಕು ತಗುಲಬಹುದೆಂದು ಬಾಡಿಗೆ ಮನೆ, ಪಿಜಿ ಮಾಲೀಕರ ಕಿರಿಕಿರಿ ಅನೇಕ ಕಡೆ ಇದೆ. ಈ ಕುರಿತು ಮಾಧ್ಯಮಗಳು ಜಾಗೃತಿ ಮೂಡಿಸುತ್ತಿದ್ದು, ಸರ್ಕಾರದಿಂದಲೂ ಪ್ರಚಾರ ನೀಡುತ್ತಿದ್ದೇವೆ. ಪ್ರತಿಯೊಬ್ಬರೂ ತಮ್ಮ ಹೊಣೆ ಅರಿಯಬೇಕೆ ವಿನಃ ಬೇರೆಯವರನ್ನು ದೂಷಿಸೋದು ಮಾಡಬಾರದು. | ಡಾ.ಬಿ.ಕೆ.ವಿಜೇಂದ್ರ ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ

ಮೂರು ವಿಭಾಗಗಳಾಗಿ ವಿಂಗಡಣೆ

ಒಬ್ಬರಿಂದ 5ಕ್ಕಿಂತ ಕಡಿಮೆ ಜನರಿಗೆ ಸೋಂಕು ಹರಡಿದ್ದರೆ, ಲೈಟ್ ಸ್ಪ್ರೆಡರ್, 5-10 ಜನರಿಗೆ ಹರಡಿದ್ದರೆ ಸ್ಪ್ರೆಡರ್, 10ಕ್ಕಿಂತ ಹೆಚ್ಚು ಜನರಿಗೆ ಹರಡಿದ್ದರೆ ಸೂಪರ್ ಸ್ಪ್ರೆಡರ್ ಎಂದು ವಿಂಗಡಣೆ ಮಾಡಲಾಗಿದೆ. ಅದರಂತೆ ಸೂಪರ್ ಸ್ಪ್ರೆಡರ್ ವಿಭಾಗದಲ್ಲಿ ಪಿ-52, 221, 419, 128, 205, 134, 125 ಹಾಗೂ 247 ಇದ್ದಾರೆ. ಯಾವುದೇ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಾರದ, ಪ್ರವಾಸ ಇತಿಹಾಸವೂ ಇಲ್ಲದ ಸೋಂಕಿತರೂ ಇದ್ದಾರೆ.

ಆದರೆ ಇಲ್ಲಿವರೆಗೆ ರಾಜ್ಯದಲ್ಲಿ ಶೇ.69 ಸೋಂಕಿತರು ನಿರ್ದಿಷ್ಟ ರೋಗಿಯ ಸಂಪರ್ಕದಿಂದಲೇ ಕರೊನಾಗೆ ಒಳಗಾಗಿದ್ದಾರೆ. ಉಳಿದ ಶೇ.31 ಎಲ್ಲಿಂದ ಬಂದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ರಾಜ್ಯದಲ್ಲಿ ಸೋಂಕಿತರ ಪೈಕಿ ಶೇ.12 ವಿದೇಶಕ್ಕೆ ತೆರಳಿದ್ದವರು, ಶೇ.13 ಅನ್ಯ ರಾಜ್ಯದ ಪ್ರವಾಸ ಇತಿಹಾಸ ಹೊಂದಿದ್ದರು, ಶೇ.7 ತೀವ್ರ ಉಸಿರಾಟದ ತೊಂದರೆಯಿಂದ ಸೋಂಕು ಪತ್ತೆಯಾಗಿದೆ.

| ರಮೇಶ ದೊಡ್ಡಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net