ಶ್ರಮಿಕ್​ ಸ್ಪೆಶಲ್​ ತೊಂದರೆಯಲ್ಲಿ ಇರುವವರಿಗೆ, ಊರಿಗೆ ಹೋಗಿ ಬರುವವರಿಗಲ್ಲ...

shramik
Published on

ನವದೆಹಲಿ: ದೇಶದ ನಾನಾ ಭಾಗಗಳಲ್ಲಿ ಲಾಕ್​ಡೌನ್​ನಿಂದಾಗಿ ಸಹಸ್ರಾರು ವಲಸಿಗರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೆಲಸವೂ ಇಲ್ಲದೆ, ಕೂಲಿಯೂ ಸಿಗದೆ ಒಪ್ಪೊತ್ತಿನ ಊಟ-ತಿಂಡಿಗೂ ಪರದಾಡುತ್ತಿದ್ದಾರೆ. ಇಂಥವರನ್ನು ಅವರವರ ರಾಜ್ಯಗಳಿಗೆ ಮರಳಲು ಅನುವು ಮಾಡಿಕೊಡಲು ರೈಲ್ವೆ ಸಚಿವಾಲಯ ಶ್ರಮಿಕ್​ ಸ್ಪೆಶಲ್​ ಎಂಬ ವಿಶೇಷ ರೈಲುಗಳ ಸಂಚಾರ ಏರ್ಪಡಿಸಿದೆ.

ಆದರೆ ಶ್ರಮಿಕ್​ ಸ್ಪೆಶಲ್​ ರೈಲುಗಳು ತೊಂದರೆಯಲ್ಲಿ ಇರುವವರಿಗೆ ಮಾತ್ರ. ಕೆಲಸ ಇಲ್ಲದಿದ್ದರೂ ಆರಾಮವಾಗಿ ತಿಂದುಂಡುಕೊಂಡು ಇದ್ದು, ಊರಿಗೆ ಹೋಗಿ ಕೋವಿಡ್​ 19 ಪರಿಸ್ಥಿತಿ ತಿಳಿಗೊಂಡ ನಂತರ ಮರಳುವವರಿಗೆ ಅಲ್ಲ ಎಂದು ಕೇಂದ್ರ ಸರ್ಕಾರ ಮೊದಲ ಬಾರಿಗೆ ಸ್ಪಷ್ಟನೆ ನೀಡಿದೆ.

ತಮಗೆಲ್ಲರಿಗೂ ಊರಿಗೆ ಹೋಗಿ ಬರಲು ರೈಲ್ವೆ ಇಲಾಖೆ ಶ್ರಮಿಕ್​ ಸ್ಪೆಶಲ್​ ರೈಲುಗಳ ಸಂಚಾರ ಏರ್ಪಡಿಸಿರುವುದಾಗಿ ಹೇಳಿ, ಹಾಗೆ ಸುಮ್ಮನೆ ಊರಿಗೆ ಹೋಗಿ ಬಂದರಾಯ್ತು ಎಂಬ ಮನೋಭಾವದವರು ಕೂಡ ರೈಲುಗಳನ್ನು ಹತ್ತುತ್ತಿದ್ದಾರೆ. ಇದರಿಂದಾಗಿ ನಿಜಕ್ಕೂ ತೊಂದರೆಯಲ್ಲಿ ಇರುವವರಿಗೆ, ತಮ್ಮ ಊರುಗಳಲ್ಲಿ ತುರ್ತು ಕೆಲಸ ಕಾರ್ಯಗಳನ್ನು ಹೊಂದಿರುವವರಿಗೆ ಊರಿಗೆ ತೆರಳಲು ತೊಡಕಾಗಬಹುದು ಎಂದು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಕೆಲ ರಾಜ್ಯಗಳು ತಮ್ಮಲ್ಲಿ ಇರುವ ಎಲ್ಲ ವಲಸಿಗರನ್ನು ಅವರವರ ರಾಜ್ಯಕ್ಕೆ ಕಳುಹಿಸಲು ಹೆಚ್ಚುವರಿ ರೈಲುಗಳನ್ನು ವ್ಯವಸ್ಥೆಗೊಳಿಸುವಂತೆ ರೈಲ್ವೆ ಇಲಾಖೆಗೆ ದುಂಬಾಲು ಬೀಳಲಾರಂಭಿಸಿದ ನಂತರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್​ ಭಲ್ಲಾ ಈ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net