

ಬೆಂಗಳೂರು: ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸೋಮವಾರ ಒಂದೇ ದಿನ ರಾಜ್ಯದಲ್ಲಿ 5,279 ಪ್ರಕರಣ ದಾಖಲಾಗಿದೆ. ಆ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 42 ಸಾವಿರಕ್ಕೇರಿದೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿನ ಪ್ರಕರಣ 10,20,434ಕ್ಕೆ ತಲುಪಿದೆ.
ಕರೊನಾ ಸೋಂಕಿನ ಪ್ರಕರಣಗಳ ಜತೆಗೆ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಸೋಮವಾರ ಒಂದೇ ದಿನ 32 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿಯೇ 18 ಜನರು ಸೋಂಕಿಗೆ ಪ್ರಾಣ ತೆತ್ತಿದ್ದು, ಮೈಸೂರಿನಲ್ಲಿ ಮೂವರು, ಕಲಬುರಗಿಯಲ್ಲಿ ಇಬ್ಬರು, ಬಳ್ಳಾರಿ, ಬೀದರ್, ಹಾವೇರಿ, ಕೋಲಾರ, ಮಂಡ್ಯ, ಶಿವಮೊಗ್ಗ, ತುಮಕೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ತಲಾ ಒಬ್ಬರು ಮರಣಹೊಂದಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 15,657ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಸೋಂಕಿತರ ಹೆಚ್ಚಳ: ಕರೊನಾ ಸೋಂಕಿನ ಹಾಟ್‌ಸ್ಪಾಟ್ ಆಗಿ ಪರಿವರ್ತನೆಗೊಳ್ಳುತ್ತಿರುವ ಬೆಂಗಳೂರಿನಲ್ಲಿ ಸೋಮವಾರ 3,728 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲೂ ಸೋಂಕಿಗೆ ಒಳಗಾದವರು ಪತ್ತೆಯಾಗಿದ್ದರೂ, ಬೀದರ್‌ನಲ್ಲಿ 264, ಕಲಬುರಗಿ 181, ಮೈಸೂರು 165, ತುಮಕೂರಿನಲ್ಲಿ 139 ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 100ಕ್ಕಿಂತ ಕಡಿಮೆ ಇದೆ.
1.93 ಲಕ್ಷ ಜನರಿಗೆ ಲಸಿಕೆ: ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಕರೊನಾ ವ್ಯಾಕ್ಸಿನ್ ನೀಡಿಕೆ ಕಾರ್ಯವನ್ನು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಸೋಮವಾರ 1,93,604 ಜನರಿಗೆ ಕರೊನಾ ಲಸಿಕೆ ನೀಡಲಾಗಿದೆ. ಅದರಲ್ಲಿ 44ರಿಂದ 59 ವರ್ಷದ 1,08,243 ಜನರಿಗೆ ಮೊದಲ ಡೋಸ್, 1,440 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಹಾಗೆಯೇ, 60 ವರ್ಷ ಮೇಲ್ಪಟ್ಟ 76,784 ಜನರಿಗೆ ಮೊದಲ ಹಾಗೂ 4,172 ಜನರಿಗೆ 2ನೇ ಡೋಸ್ ವ್ಯಾಕ್ಸಿನ್ ಕೊಡಲಾಗಿದೆ. ಉಳಿದಂತೆ ಆರೋಗ್ಯ ಕಾರ್ಯಕರ್ತರಲ್ಲಿ 199 ಮಂದಿ ಮೊದಲ ಹಾಗೂ 770ಮಂದಿ 2ನೇ ಡೋಸ್ ಹಾಗೂ ಮುಂಚೂಣಿ ಕಾರ್ಯಕರ್ತರಲ್ಲಿ 448 ಮೊದಲ ಹಾಗೂ 1,548 ಮಂದಿ 2ನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರೊಂದಿಗೆ ಈವರೆಗೂ 45.95 ಲಕ್ಷ ಡೋಸ್ ಲಸಿಕೆ ವಿತರಣೆಯಾಗಿದೆ.