ಜಾರಕಿಹೊಳಿ ಹಾಸಿಗೆ ಮೇಲಿರುವ ವಿಡಿಯೋ ಬಿಡುಗಡೆ; 'ಯಾವ ಮಂಚದ ಮೇಲೂ ಇಲ್ಲ..' ಎಂದಿದ್ದಕ್ಕೆ ಉತ್ತರವೇ ಈ ವಿಡಿಯೋ?

ramesh jarkiholi
Published on

ಬೆಂಗಳೂರು: ಸಿಡಿ ಪ್ರಕರಣ ದಿನೇದಿನೆ ಸದ್ದು ಮಾಡುತ್ತಿರುವ ಜತೆಗೆ ದಿನಕ್ಕೊಂದು ತಿರುವನ್ನೂ ಪಡೆಯುತ್ತಿದ್ದು, ಇದೀಗ ಈ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಹಾಸಿಗೆ ಮೇಲಿರುವ ವಿಡಿಯೋವೊಂದು ಈಗ ಹರಿದಾಡುತ್ತಿದೆ. ಈ ಮೂಲಕ ಎದುರಾಳಿಗಳ ಟೀಕೆಗೆ ಹಾಸಿಗೆ ಮೇಲಿದ್ದುಕೊಂಡೇ ಸೈಲೆಂಟಾಗಿ ಟಾಂಗ್ ಕೊಡುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

ವಿವಾದಿತ ಸಿಡಿ ಪ್ರಕರಣವನ್ನು ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕರೊನಾ ಸೋಂಕಿರುವುದು ಇಂದು ದೃಢಪಟ್ಟಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ, ಜಾರಕಿಹೊಳಿ ಕರೊನಾ ಸೋಂಕಿಗೆ ಒಳಗಾಗಿರುವ ಬಗ್ಗೆಯೇ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅನುಮಾನ ವ್ಯಕ್ತಪಡಿಸಿದ್ದರು. ಅದರಲ್ಲೂ ಈ ಪ್ರಕರಣದಲ್ಲಿ ಸಿಡಿ ಲೇಡಿ ಪರವಾಗಿ ಓಡಾಡುತ್ತಿರುವ ಕೆಪಿಸಿಸಿ ಕಾನೂನು ಘಟಕದ ಸೂರ್ಯ ಮುಕುಂದರಾಜ್ ಕೂಡ ಅನುಮಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, 'ಕರೋನ ಸೋಂಕಿತ ವ್ಯಕ್ತಿ ಆಸ್ಪತ್ರೆಯ ಯಾವ ಮಂಚದ ಮೇಲೂ ಕಾಣುತ್ತಿಲ್ಲ..' ಎಂಬುದಾಗಿ ಫೇಸ್​ಬುಕ್​ನಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿ ಸಂದೇಹ ವ್ಯಕ್ತಪಡಿಸಿದ್ದರು.

ಇದಾಗಿ ಸುಮಾರು ಐದು ಗಂಟೆಗಳಲ್ಲಿ ಮಾಜಿ ಸಚಿವ ಜಾರಕಿಹೊಳಿ ಆಸ್ಪತ್ರೆಯೊಂದರ ಹಾಸಿಗೆ ಮೇಲೆ ಇರುವ ದೃಶ್ಯದ ವಿಡಿಯೋ ಬಹಿರಂಗವಾಗಿದೆ. ಪಿಪಿಇ ಕಿಟ್ ಧರಿಸಿರುವ ಒಂದಿಬ್ಬರ ನಡುವೆ ಹಾಸಿಗೆ ಮೇಲೆ ಜಾರಕಿಹೊಳಿ ಕೂಡ ಪಿಪಿಇ ಕಿಟ್-ಮಾಸ್ಕ್​ ಧರಿಸಿರುವುದು ಈ ವಿಡಿಯೋದಲ್ಲಿದೆ. ರಮೇಶ್ ಜಾರಕಿಹೊಳಿ ಗೋಕಾಕ್​ನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿನ ಕಾರಣಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net