

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು ಹಾಗೂ ಅನುದಾನ ಮಂಜೂರಾತಿ ಕುರಿತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಧಾಸಭಾ ಅಧಿವೇಶನದಲ್ಲಿ ಶೂನ್ಯ ಅವಧಿ ಸಂದರ್ಭ ಪ್ರಸ್ತಾಪಿಸಿದ್ದು, ಕೃಷಿ, ಅರಣ್ಯ, ಇಂಧನ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರ ಗಮನ ಸೆಳೆದಿದ್ದಾರೆ.
ಶಾಸಕರ ಪ್ರಶ್ನೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, 2023-24ರಲ್ಲಿ ಬರದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಎಂಒ 4 ಭತ್ತದ ಬೀಜ ಉತ್ಪಾದಿಸಲಾಗಲಿಲ್ಲ. ಪ್ರಸ್ತುತ ಉಡುಪಿ ಜಿಲ್ಲೆಗೆ 249.50 ಕ್ವಿಂಟಾಲ್ ಎಂಒ 4 ಬಿತ್ತನೆ ಬೀಜ ಸರಬರಾಜಾಗಿದೆ. ಎಂಒ 4 ತಳಿಗೆ ಪರ್ಯಾಯವಾಗಿ ಸಹ್ಯಾದ್ರಿ ಕೆಂಪು ಮುಕ್ತಿ ಭತ್ತ 440 ಕ್ವಿಂಟಾಲ್, ಉಮಾ 196.50 ಕ್ವಿಂಟಾಲ್ ಮತ್ತು ಜ್ಯೋತಿ 79.50 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜಾಗಿದೆ. ಕೃಷಿ ಇಲಾಖೆಯಿಂದ ವಿತರಿಸಲಾಗುವ ಎಲ್ಲ ತಳಿಗಳ ಬೀಜಗಳಿಗೆ ಸಾಮಾನ್ಯನಿಗೆ ಕೆಜಿಗೆ 8 ರೂ., ಪ.ಜಾ/ಪ.ಪಂ. ರೈತರಿಗೆ ಕೆಜಿಗೆ 12ರೂ. ಸಹಾಯಧನ ಸಹಿತ ಸರಬರಾಜು ಮಾಡಲಾಗಿದೆ ಎಂದಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಉತ್ತರಿಸಿ, ಮಳೆಗಾಲದಲ್ಲಿ ಸಂಭವಿಸಬಹುದಾದ ಅವಘಡ ತಡೆಗಾಗಿ ಅಪಾಯಕಾರಿ ಮರ, ಗೆಲ್ಲುಗಳನ್ನು ಇಲಾಖಾ ತೆರವುಗೊಳಿಸುತ್ತದೆ. ಇದಕ್ಕಾಗಿ ಅನುದಾನ ಲಭ್ಯವಿದೆ. ಕಾಪು ಕ್ಷೇತ್ರದಲ್ಲಿ ರಸ್ತೆಗೆ ಉರುಳಿದ ಆರು ಮರಗಳನ್ನು ತೆರವುಗೊಳಿಸಲಾಗಿದೆ ಎಂದರು.
ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕುರಿತು ಶಾಸಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕಾಪು ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 2023-24ರಲ್ಲಿ ಸಿಎಂಜಿಎಸ್‌ವೈ ಯೋಜನೆಯಡಿ 59.51ಲಕ್ಷ ರೂ., ಟಾಸ್ಕ್‌ಫೋರ್ಸ್ ಯೋಜನೆಯಡಿ 40.76 ಲಕ್ಷ ರೂ. ಸಹಿತ 99.27 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಕಾಪು ಮೆಸ್ಕಾಂನಲ್ಲಿ 376 ಹುದ್ದೆ
ನೇಮಕಾತಿ ಸಹಿತ ವಿವಿಧ ಸಮಸ್ಯೆಗಳ ಕುರಿತು ಶಾಸಕ ಸುರೇಶ್ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಕಾಪು ಕ್ಷೇತ್ರದಲ್ಲಿ ಮೆಸ್ಕಾಂಗೆ ಸಂಬಂಧಿಸಿ 376 ಹುದ್ದೆಗಳು ಮಂಜೂರಾಗಿದ್ದು, 195 ಹುದ್ದೆಗಳು ಭರ್ತಿಯಾಗಿವೆ. 181 ಹುದ್ದೆಗಳು ಖಾಲಿಯುಳಿದಿವೆ. ನಿರಂತರ ವಿದ್ಯುತ್ ಪೂರೈಕೆ, ಗ್ರಾಹಕರ ಅಡಚಣೆ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ಹೊರಗುತ್ತಿಗೆ ಆಧಾರದಲ್ಲಿ ಮಾನವ ಸಂಪನ್ಮೂಲ ಬಳಸಿ ಸೇವೆಯಲ್ಲಿ ವೃತ್ಯಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.