‘ನಾವು ನಿಮ್ಮೊಂದಿಗಿದ್ದೇವೆ’ ಎಂದ ಕೈ ನಾಯಕರು ಕೃಷಿಕರಿಂದ 3.5 ಸಾವಿರ ಟನ್ ಹಣ್ಣು, ತರಕಾರಿ ಖರೀದಿಸಿದ್ರು: ಯಾವ ನಾಯಕರು ಎಷ್ಟು ಖರೀದಿ ಮಾಡಿದ್ರು?!

congress leaders purchased vegitables 27 APR 20
Published on

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆ ಸಾರಿಗೆ ಸಂಚಾರ ನಿರ್ಬಂಧ ಕಾರಣಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ‘ಸರ್ಕಾರಿ ವೇಗದಲ್ಲಿ’ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಪ್ರಯತ್ನ ನಡೆದಿದೆ. ಈ ನಡುವೆ, ಕಾಂಗ್ರೆಸ್ ನಾಯಕರು ಮಾಡಿದ ಪ್ರಯತ್ನ ಗಮನ ಸೆಳೆಯುವಂತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಶಾಸಕರು ಹಾಗೂ ಪದಾಧಿಕಾರಿಗಳಿಗೆ ಸೂಚನೆ ನೀಡಿ, ತಕ್ಷಣವೇ ರೈತರಿಂದ ಉತ್ಪನ್ನ ಖರೀದಿಸಿ ಎಂದು ಕರೆ ನೀಡಿದ್ದರು. ಆ ಪ್ರಕಾರ, ಕಳೆದ 10 ದಿನಗಳಲ್ಲಿ ಪಕ್ಷದ ಬಹುತೇಕ ಶಾಸಕರು ಆದೇಶ ಪಾಲಿಸಿದ್ದಾರೆ.

ಮಾಹಿತಿ ಪ್ರಕಾರ, ಒಟ್ಟು 3.5 ಸಾವಿರ ಟನ್ ಹಣ್ಣು- ತರಕಾರಿಯನ್ನು ರೈತರಿಂದ ಅವರ ಹೊಲದಲ್ಲೇ ಮಧ್ಯವರ್ತಿರಹಿತವಾಗಿ ಖರೀದಿಸಲಾಗಿದೆ. ಆ ಮೂಲಕ ರೈತರಿಗೂ ನೆರವಾಗಿ, ಬಡವ ರಿಗೂ ಹಂಚಿ ಆಪತ್ಕಾಲದಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಹೊಲಗಳಿಲ್ಲದ ನಗರ ಪ್ರದೇಶದ ಶಾಸಕರು ನೆರೆಹೊರೆ ಗ್ರಾಮಗಳಿಗೆ ತೆರಳಿ ರೈತರ ಕಷ್ಟಕ್ಕೆ ಕಿವಿಗೊಟ್ಟಿದ್ದಾರೆ. ‘ನಾವು ನಿಮ್ಮೊಂದಿಗಿದ್ದೇವೆ’ ಎಂದು ಮೈದಡವಿ, ಅವರು ಬೆಳೆದ ಉತ್ಪನ್ನವನ್ನು ಖರೀದಿಸಿದ್ದಾರೆ.

ಈ ಚಿಂತನೆಗೆ ಮೊದಲು ಮುನ್ನುಡಿ ಇಟ್ಟವರು ಸಂಸದ ಡಿ.ಕೆ. ಸುರೇಶ್. ಆನೇಕಲ್, ಕನಕಪುರ, ಅರಸೀಕೆರೆ, ಮದ್ದೂರು, ನಾಗಮಂಗಲ, ಪಾವಗಡ ಸೇರಿ ಹತ್ತಾರು ಕಡೆ ತೆರಳಿ ತರಕಾರಿ ಖರೀದಿಸಿದ್ದಾರೆ. ಈವರೆಗೆ 2 ಸಾವಿರ ಟನ್ ತರಕಾರಿ, ಹಣ್ಣನ್ನು ಅವರು ಖರೀದಿಸಿದ್ದಾರೆ. ಹೆಬ್ಬಾಳ ಶಾಸಕ ಬೈರತಿ ಸುರೇಶ್ 40 ಟನ್ ತರಕಾರಿ ಖರೀದಿ ಮಾಡಿ ನಾಗರಿಕರಿಗೆ ಹಂಚಿದ್ದಾರೆ. ಹಾಸನ ಜಿಲ್ಲಾ ಅಧ್ಯಕ್ಷ ಮಂಜುನಾಥ್ 500 ಟನ್, ದಿನೇಶ್ ಗುಂಡೂರಾವ್ ಪ್ರತಿನಿತ್ಯ 20 ಟನ್​ನಂತೆ ಖರೀದಿ ಮುಂದುವರಿಸಿದ್ದಾರೆ. ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ಕುಣಿಗಲ್ ಶಾಸಕ ಡಾ.ರಂಗನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಕ್ ಸೇರಿ ಹತ್ತಾರು ನಾಯಕರು ಪಕ್ಷದ ಆದೇಶ ಪಾಲಿಸಿ ಗಮನ ಸೆಳೆಯುವಂತೆ ಖರೀದಿ ಮಾಡಿದ್ದಾರೆ.

ಮಾಜಿ ಸಚಿವ ಕೃಷ್ಣಬೈರೇಗೌಡ ಹಳ್ಳಿಯಿಂದ ವಿವಿಧ ಬಗೆಯ ತರಕಾರಿ ತಂದು ಪ್ಯಾಕೇಟ್ ಮಾಡಿ ಮನೆ ಮನೆಗೆ ಹಂಚಿಕೆ ಮಾಡಿದ್ದಾರೆ. ಈ ಬಗ್ಗೆ ವಿವರಣೆ ನೀಡಿರುವ ಅವರು, ಲಾಕ್​ಡೌನ್ ಸಂದರ್ಭ ರೈತರು ಬೆಳೆದ ಬೆಳೆ ಮಾರಲಾಗದೆ ಕಷ್ಟ ಅನುಭವಿಸುತ್ತಿದ್ದಾರೆ. ನಗರ ಪ್ರದೇಶದಲ್ಲಿ ಜನರು 2-3 ಪಟ್ಟು ಹೆಚ್ಚು ಬೆಲೆ ಕೊಂಡುಕೊಳ್ಳುವಂತಾಗಿದೆ. ತರಕಾರಿಗಳನ್ನು ರೈತರಿಂದ ಖರೀದಿಸಿ ಆರ್ಥಿಕವಾಗಿ ಹಿಂದುಳಿದಿರುವವರು ಇರುವ ಕಡೆ ನಿತ್ಯ ವಿತರಿಸಲಾಗಿದೆ ಎಂದು ಹೇಳಿದ್ದಾರೆ.

ಭಿನ್ನ ನಡೆ: ಸರ್ಕಾರದ ದಿನಸಿ ಕಿಟ್ ಮೇಲೆ ತಮ್ಮ ಫೋಟೋ ಇರುವ ಸ್ಟಿಕ್ಕರ್ ಹಚ್ಚಿ ಬಡ ಜನರಿಗೆ ವಿತರಿಸಿ ಹುಂಬತನ ತೋರುವ ರಾಜಕಾರಣಿಗಳ ನಡುವೆ, ರೈತರಿಂದ ತರಕಾರಿ ಖರೀದಿಸಿ ಬಡವರಿಗೆ ಹಂಚುವ ಪ್ರಯೋಗ ಗಮನ ಸೆಳೆಯುವಂತಿದೆ. ರೈತನ ಸಮಸ್ಯೆ ಆಲಿಸಿ ಅವನಿಗೆ ನೆರವಾಗಬೇಕೆಂದು ಪಕ್ಷ ತನ್ನ ಮುಖಂಡರನ್ನು ಹೊಲಗಳಿಗೆ ಕಳಿಸಿದ್ದು ಸಹ ಎದುರಾಳಿ ಪಕ್ಷಗಳು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.

ಅನುಕೂಲಗಳೇನು?

  • ಕಷ್ಟಕಾಲದಲ್ಲಿ ರೈತನಿಗೆ ನೆರವು

  • ರೈತರ ಹೊಲಕ್ಕೆ ಭೇಟಿ ಕೊಡುವ ಮೂಲಕ ಆತ್ಮವಿಶ್ವಾಸ ತುಂಬುವ ಪ್ರಯತ್ನ

  • ಕಷ್ಟಕಾಲದಲ್ಲಿ ಪಕ್ಷ ರೈತ ಸಮುದಾಯ ದೊಟ್ಟಿಗಿರುತ್ತದೆ ಎಂಬ ಸಂದೇಶ

  • ಬಡ ಜನರಿಗೂ ದಿನದ ಅಗತ್ಯ ವಸ್ತು ಹಂಚಿ ಹತ್ತಿರ

  • ಶಾಸಕರಿಗೆ ರೈತನ ಕಷ್ಟದ ಅರಿವು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net