ವಿಧಾನಸಭೆ ಚುನಾವಣೆಗೆ ಟಿಕೆಟ್​ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ ಕಾಂಗ್ರೆಸ್​! ಅರ್ಜಿ ಜತೆಗೆ ಶುಲ್ಕವನ್ನೂ ಪಾವತಿಸಬೇಕು

congress40
Published on

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್​ ಪಕ್ಷವು ಟಿಕೆಟ್​ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಅರ್ಜಿಗೆ 5 ಸಾವಿರ ರೂ. ಶುಲ್ಕ ನಿಗದಿ ಮಾಡಲಾಗಿದೆ. ಅರ್ಜಿಯ ಜತೆಗೆ ಸಾಮಾನ್ಯ ವರ್ಗಕ್ಕೆ ಸೇರಿದವರು 2 ಲಕ್ಷ ರೂ. ಡಿಡಿ ಹಾಗೂ ಕಾಂಗ್ರೆಸ್​ ಸದಸ್ಯತ್ವ ವಿವರ ಲಗತ್ತಿಸಬೇಕು. ಪರಿಶಿಷ್ಟ ವರ್ಗದವರಿಗೆ ಶೇ.50 ವಿನಾಯಿತಿ ನೀಡಲಾಗಿದೆ. ಟಿಕೆಟ್​ ಆಕಾಂಕ್ಷಿಗಳು ನ.5 ರಿಂದ 15 ರೊಳಗೆ ಅರ್ಜಿ ಸಲ್ಲಿಸಬಹುದು ಎಂದರು. ಅರ್ಜಿಯ ಜತೆಗೆ ಸಂಗ್ರಹವಾಗುವ ಹಣವನ್ನು ಪಕ್ಷದ ವಿವಿಧ ಕಟ್ಟಡಗಳ ಕಾಮಗಾರಿಗೆ ಬಳಸಲಾಗುತ್ತದೆ ಎಂದು ಡಿಕೆಶಿ ತಿಳಿಸಿದರು.

ರಾಜ್ಯ ವಿಧಾನಸಭೆಗೆ 2023 ರ ಚುನಾವಣೆಯಲ್ಲಿ ಹಾಲಿ ಶಾಸಕರ ಸಮೇತ ಟಿಕೆಟ್​ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಜಿ ಹಾಕಲೇಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ. ಕಾಂಗ್ರೆಸ್​ ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ್​ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿ ಅವರ ನಾಯಕತ್ವ ಒಪ್ಪಿ ಬೇಷರತ್ತಾಗಿ ಪಕ್ಷ ಸೇರಲು ಬಯಸುವವರು ಅರ್ಜಿ ಹಾಕಬಹುದು. ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅರ್ಜಿ ಹಾಕಿದ ನಂತರ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಯಾರನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಲಿದೆ ಎಂದು ವಿವರಿಸಿದರು.

ಅರ್ಜಿ ಹಾಕಲು ನಮ್ಮಲ್ಲಿ ವಯೋಮಿತಿ ಇಲ್ಲ. ನಮ್ಮಲ್ಲಿ ಮಾರ್ಗದರ್ಶಕ ಮಂಡಲಿ ಇಲ್ಲ. ನಾವು 92 ವರ್ಷದ ಶಾಮನೂರು ಶಿವಶಂಕರಪ್ಪ ಅವರನ್ನು ಇಟ್ಟುಕೊಂಡಿದ್ದೇವೆ. ಅವರು ಬೇರೆಯವರಿಗಿಂತ ಹೆಚ್ಚು ಓಡಾಡುತ್ತಿದ್ದಾರೆ. ಕ್ಷೇತ್ರದ ಎಲ್ಲ ಬೂತ್​ಗಳಿಗೂ ಭೇಟಿ ನೀಡುತ್ತಿದ್ದಾರೆ. ನಮ್ಮ ತಂದೆ ತಾಯಿಗಳನ್ನು ನಾವು ಮನೆಯಿಂದ ಆಚೆ ಹಾಕುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net