ಟವರ್‌ಗಳ ಬಾಕಿ ಕೆಲಸ ಪೂರ್ಣಗೊಳಿಸಿ

bsnl
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಸಂಸದ ಬಿ.ವೈ.ರಾಘವೇಂದ್ರ ಅಧ್ಯಕ್ಷತೆಯಲ್ಲಿ ಸಾಗರ ರಸ್ತೆಯಲ್ಲಿರುವ ಬಿಎಸ್ಸೆನ್ನೆಲ್ ಕಚೇರಿಯಲ್ಲಿ ಮಂಜೂರಾದ ಟವರ್ ನಿರ್ಮಾಣಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ನಡೆದಿದ್ದು, ಈ ಸಂದರ್ಭ ಬೈಂದೂರು ಸಹಿತ ಪ್ರಮುಖ ಕಡೆಗಳಲ್ಲಿ ಬಾಕಿ ಟವರ್ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು.

ಕರ್ನಾಟಕ ವೃತ್ತದ ಬಿಎಸ್ಸೆನ್ನೆಲ್ ಮುಖ್ಯ ಜನರಲ್ ಮ್ಯಾನೇಜರ್ (ಟೆಲಿಕಾಂ) ಎನ್.ಸುಜಾತಾ ಅವರು ಕ್ಷೇತ್ರಕ್ಕೆ ಮಂಜೂರಾಗಿರುವ ಬಿಎಸ್ಸೆನ್ನೆಲ್ ಟವರ್ ನಿರ್ಮಾಣಗೊಳ್ಳುವ ಸ್ಥಳ, ಕಾಮಗಾರಿ ಸ್ಥಿತಿಗತಿ ಕುರಿತು ಪರಿಶೀಲಿಸಿದರು.

ಜಿಲ್ಲೆಗೆ ಮಂಜೂರಾಗಿರುವ 134 ಪ್ರಸ್ತಾಪಿತ ಸ್ಥಳಗಳಲ್ಲಿ 4ಜಿ ನ್ಯಾಚುರೇಶನ್ ಉಳ್ಳ 49 ಟವರ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕ ಸೇವೆಗೆ ಲಭ್ಯವಿದೆ. ಆರು ಟವರ್‌ಗಳ ಕಾಮಗಾರಿ ಪ್ರಗತಿ ಅಂತಿಮ ಹಂತದಲ್ಲಿದ್ದು, ಉಳಿದ ಕಾಮಗಾರಿಗಳ ಪ್ರಗತಿ ವಿವಿಧ ಹಂತದಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಂಸದ ಬಿ.ವೈ ರಾಘವೇಂದ್ರ ಪ್ರತಿಕ್ರಿಯಿಸಿ, ಹೊಸನಗರ ತಾಲೂಕಿನ ಬ್ರಾಹ್ಮಣವಾಡಿ ಕೊಳವಾಡಿ, ಗಿಣಿಕಲ್ಲು, ಮಣಸಟ್ಟೆ, ಮತ್ತಿಕ್ಕೆ, ನೀಲಕಂಠನಗೋಟ, ಪಿ ಕಲ್ಲುಕೊಪ್ಪ ಗ್ರಾಮಗಳಲ್ಲಿ ಜಾಗ ಮಂಜೂರಾತಿ ಬಾಕಿ ಇದ್ದು, ತಕ್ಷಣವೇ ಮಂಜೂರಾತಿ ಪಡೆಯಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆಟಗರಿ-5 ಮತ್ತು 6 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೊಸನಗರ ತಾಲೂಕಿಗೆ 7, ಸಾಗರಕ್ಕೆ 7, ಶಿಕಾರಿಪುರಕ್ಕೆ-2, ಸೊರಬಕ್ಕೆ 7 ಹಾಗೂ ತೀರ್ಥಹಳ್ಳಿಗೆ ಟವರ್‌ಗಳು ಮಂಜೂರಾಗಿದ್ದು, ಟವರ್‌ಗಳನ್ನು ನಿರ್ಮಾಣ ಮಾಡಲು ಶೀಘ್ರವೇ ಜಾಗ ಗುರುತಿಸಲು ಅಧಿಕಾರಿಗಳಿಗೆ ಸಂಸದರು ತಾಕೀತು ಮಾಡಿದರು.

ನಿಗಮದ ಜನರಲ್ ಮ್ಯಾನೇಜರ್ ಬಿ.ಕೆ. ಸಿಕ್ಕಾ, ಡೆಪ್ಯುಟಿ ಜನರಲ್ ಮ್ಯಾನೇಜರ್ ಕೃಷ್ಣ ಮೊಗೇರ ಮತ್ತು ವೆಂಕಟೇಶ್, ಸಹಾಯಕ ಜನರಲ್ ಮ್ಯಾನೇಜರ್, ಜ್ಯೂನಿಯರ್ ಟೆಲಿಕಾಂ ಅಧಿಕಾರಿಗಳು ಹಾಗೂ ಸಂಬಂಧಿತ ಗುತ್ತಿಗೆದಾರರು ಉಪಸ್ಥಿತರಿದ್ದರು.

ಅಧಿಕಾರಿಗಳ ವಿರುದ್ಧ ಸಿಡಿಮಿಡಿ

ಬಿಎಸ್ಸೆನ್ನೆಲ್ ನೆಟ್‌ವರ್ಕ್ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಕುರಿತು ಹೆಚ್ಚುತ್ತಿರುವ ಸಾರ್ವಜನಿಕರ ದೂರುಗಳಿಂದಾಗಿ ಸಂಸದ ಬಿ.ವೈ ರಾಘವೇಂದ್ರ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

ಬಾಕಿ ಕಾಮಗಾರಿ ಪೂರ್ತಿಗೆ ತಾಕೀತು

ಬೈಂದೂರು ವ್ಯಾಪ್ತಿಯಲ್ಲಿ 28 ಟವರ್‌ಗಳು ಮಂಜೂರಾಗಿದ್ದು, ಇದರಲ್ಲಿ 22 ಟವರ್‌ಗಳ ಕಾಮಗಾರಿ ಸಂಪೂರ್ಣವಾಗಿ ಮುಗಿದಿವೆ. ಆರು ಟವರ್‌ಗಳ ಕಾಮಗಾರಿಯನ್ನು ಶೀಘ್ರವೇ ಮುಗಿಸಿ ಸಾರ್ವಜನಿಕರ ಬಳಕೆಗೆ ಲಭ್ಯವಾಗಬೇಕು ಎಂದು ಮುಖ್ಯ ಜನರಲ್ ಮ್ಯಾನೇಜರ್ (ಟೆಲಿಕಾಂ)ಗೆ ತಾಕೀತು ಮಾಡಲಾಯಿತು.

ಅಧಿಕಾರಿಗಳ ಕಾರ್ಯವೈಖರಿಗೆ ಸಂಸದ ಅಸಮಾಧಾನಸ್ಥಳ ಪರಿಶೀಲನೆ, ಮಂಜೂರಾತಿಗೆ ಆದೇಶನೆಟ್‌ವರ್ಕ್ ಸಮಸ್ಯೆ ಇರುವಲ್ಲೆಲ್ಲಾ ಕಾರ್ಯನಿರ್ವಹಿಸಲು ಸೂಚನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net