

ಪಡುಬಿದ್ರಿ: ಕೋಟೆ ಗ್ರಾಮದ ಯಮುನಾ ಎಂಬುವರ ವಾಸದ ಮನೆ ಗಾಳಿ ಮಳೆಗೆ ಗುರುವಾರ ಬೆಳಗ್ಗೆ ಕುಸಿದು ಬಿದ್ದು ಮಗಳ ಸಮಯಪ್ರಜ್ಞೆಯಿಂದ ಮನೆಯಲ್ಲಿದ್ದ ಮೂವರು ಅಪಾಯದಿಂದ ಪಾರಾಗಿದ್ದಾರೆ.
ಯಮುನಾ ಅವರ ಪುತ್ರಿ ಪ್ರೇಕ್ಷಾ ಓದಲೆಂದು ಕೋಣೆಗೆ ಹೋಗಿದ್ದ ವೇಳೆ ಮನೆ ಬೀಳುವ ಶಬ್ದ ಕೇಳಿ ಮನೆಯಲ್ಲಿದ್ದ ತಾಯಿ ಯಮುನಾ ಹಾಗೂ ಸಹೋದರ ಲತೇಶ್ ಅವರಿಗೆ ತಿಳಿಸಿ ತಕ್ಷಣ ಕೋಣೆಯಿಂದ ಹೊರಬಂದಿದ್ದಾರೆ. ಪ್ರೇಕ್ಷಾ ತಂದೆ ರಮೇಶ್ ಸಂಬಂಧಿಕರ ಮನೆಗೆ ತೆರಳಿದ್ದು, ಮಗಳ ಸಮಯಪ್ರಜ್ಞೆಯಿಂದ ಅವರೆಲ್ಲ ಸಂಭವಿಸಬಹುದಾದ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಾಪು ತಹಸೀಲ್ದಾರ್ ಪ್ರತಿಭಾ ಆರ್. ಭೇಟಿ ನೀಡಿ ಪರಿಶೀಲಿಸಿ ಪರಿಹಾರದ ಭರವಸೆ ನೀಡಿದ್ದಾರೆ. ಗ್ರಾಮಾಡಳಿತಾಧಿಕಾರಿ ಲೋಕನಾಥ ಲಮಾಣಿ ಇದ್ದರು.