ರಸ್ತೆ ಅಭಿವೃದ್ಧಿಗೆ ಮೀನಾಮೇಷ : ಮೀನುಗಾರರಿಗೆ ಸಂಕಷ್ಟ ಕಾಮಗಾರಿಗೆ ಆಗ್ರಹ

road
ಹದಗೆಟ್ಟಿರುವ ಮರವಂತೆ ಬಂದರು ಸಂಪರ್ಕಿಸುವ ರಸ್ತೆ
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಮರವಂತೆ ಹೊರಬಂದರಿಗೆ ತೆರಳುವ ಮೀನುಗಾರಿಕಾ ರಸ್ತೆ ಅಭಿವೃದ್ಧಿಗೆ ಕಳೆದ 2-3 ವರ್ಷಗಳಿಂದ ಮೀನಾಮೇಷ ಎಣಿಸುತ್ತಿದ್ದು, ಇದರಿಂದ ಮೀನುಗಾರರು ಸಹಿತ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಕೇವಲ 500 ಮೀ. ರಸ್ತೆ ಕಾಂಕ್ರೀಟ್ ಕಾಮಗಾರಿ ಬಾಕಿಯಿದ್ದು, ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ.
ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಿಂದ ಮೀನುಗಾರಿಕಾ ಹೊರಬಂದರಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಒಟ್ಟು 1 ಕಿ.ಮೀ. ದೂರದ ರಸ್ತೆ ಪೈಕಿ ಈಗಾಗಲೇ 3 ವರ್ಷದ ಹಿಂದೆಯೇ 500 ಮೀ. ವರೆಗೆ ಕಾಂಕ್ರೀಟ್ ಕಾಮಗಾರಿ ಆಗಿದೆ. ಆದರೆ ಬಾಕಿ ಉಳಿದ 500 ಮೀ. ರಸ್ತೆ ಕಾಂಕ್ರೀಟ್ ಮಾತ್ರ ಇಂದು -ನಾಳೆ ಅನ್ನುವುದರಲ್ಲಿಯೇ ದಿನ ಕಳೆಯುತ್ತಿದೆ.

ಮೀನು ಸಾಗಾಟಕ್ಕೆ ಸಮಸ್ಯೆ

ಹೆದ್ದಾರಿಯಿಂದ ಇದೇ ಮಾರ್ಗವಾಗಿ ಬಂದರಿಗೆ ಮೀನು ಸಾಗಾಟದ ಇನ್ಸುಲೇಟರ್ ಸಹಿತ ಇತರೆ ವಾಹನ, ಐಸ್ ಪೂರೈಸುವ ವಾಹನ ಸಹ ಸಂಚರಿಸುತ್ತವೆ. ಆದರೆ ಸಂಪೂರ್ಣ ಹದಗೆಟ್ಟ ಈ ರಸ್ತೆ ಅವ್ಯವಸ್ಥೆಯಿಂದ ಎಲ್ಲರೂ ಸಂಕಷ್ಟ ಅನುಭವಿಸುವಂತಾಗಿದೆ. ಮೀನುಗಾರರ ಸಹಿತ ನಿತ್ಯ ನೂರಾರು ಮಂದಿ ಈ ರಸ್ತೆ ಆಶ್ರಯಿಸಿದ್ದಾರೆ.

ಕಾಮಗಾರಿ ಎಂದು?

ಮೊದಲ ಹಂತದಲ್ಲಿ ಸುಮಾರು 350 ಮೀ. ಹಾಗೂ 190 ಮೀ. ರಸ್ತೆಗೆ 3 ವರ್ಷಗಳ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಆಗಿನ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸಹಕಾರದಲ್ಲಿ ಅನುದಾನದಿಂದ ಕಾಂಕ್ರೀಟ್ ಕಾಮಗಾರಿ ನಡೆದಿತ್ತು. ಆ ಬಳಿಕ ಬಾಕಿ ಉಳಿದ ರಸ್ತೆ ಹದಗೆಟ್ಟ ವೇಳೆ ಅನುದಾನ ಮೀಸಲಿಡುವುದಾಗಿ ಹೇಳಿದ್ದರೂ, ಆಗ ಬಂದರಿನ ಕಾಮಗಾರಿ ಮುಗಿದ ಬಳಿಕ ಈ ರಸ್ತೆ ಅಭಿವೃದ್ಧಿಪಡಿಸಿದರೆ ಉತ್ತಮ ಎನ್ನುವುದಾಗಿ ಜನ ಹೇಳಿದ್ದರು. ಆದರೆ ಬಂದರಿನ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ರಸ್ತೆಗೆ ಕಾಂಕ್ರೀಟ್ ಭಾಗ್ಯವೂ ಇಲ್ಲದಂತಾಗಿದೆ.

ಮೀನುಗಾರರ ಆಗ್ರಹ

ಅತಿ ಹೆಚ್ಚು ಆದಾಯ ಬರುವ ವಲಯಗಳಲ್ಲಿ ಒಂದಾಗಿರುವ ಮೀನುಗಾರಿಕೆ ಸಂಬಂಧಪಟ್ಟ ಈ ರಸ್ತೆ ದುಸ್ಥಿತಿಯೇ ಹೀಗಾದರೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆೆ.ಇನ್ನಾದರೂ ಮೀನುಗಾರಿಕೆ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಿ, ರಸ್ತೆ ಅಭಿವೃದ್ಧಿಗೆ ಮುಂದಾಗಲಿ ಎನ್ನುವುದು ಮೀನುಗಾರರ ಆಗ್ರಹ.

ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಪಂಚಾಯಿತಿ ಅನುದಾನದಲ್ಲಿ ಕಷ್ಟ. ಅದಕ್ಕಾಗಿ ಈ ಹಿಂದೆಯೇ ಪಂಚಾಯಿತಿನಿಂದ ಆಗಿನ ಶಾಸಕರು, ಸಂಬಂಧಪಟ್ಟ ಮೀನುಗಾರಿಕಾ ಇಲಾಖೆಗೂ ಮನವಿ ಸಲ್ಲಿಸಲಾಗಿದೆ. ಈಗ ಮತ್ತೆ ಶಾಸಕರು, ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.-ಲೋಕೇಶ್ ಖಾರ್ವಿ, ಮರವಂತೆ ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net