ಮತ ತಂದುಕೊಡದಿದ್ದರೂ ಜಾತ್ಯತೀತ ನಿಲುವಿಗೆ ಬದ್ಧ: ಸಿಎಂ ಸಿದ್ದರಾಮಯ್ಯ

Untitled design - 2024-06-16T164518.381
Published on

ವಿಜಯಪುರ: ಜಾತ್ಯತೀತ ನಿಲುವು ಮತ ತಂದುಕೊಡದೇ ಇರಬಹುದು. ಆದರೆ, ಆ ನಿಲುವಿಗೆ ಬದ್ದರಾಗಿರಬೇಕು. ಅದಕ್ಕಾಗಿ ಯಾವುದೇ ಜಾತಿ, ಮತ, ಧರ್ಮ ನೋಡದರೆ ಎಲ್ಲರಿಗೂ ಗ್ಯಾರಂಟಿ ಯೋಜನೆ ವ್ಯಾಪ್ತಿಗೆ ಒಳಪಡಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಚಡಚಣ ತಾಲೂಕಿನ ಇಂಚಗೇರಿ ಗ್ರಾಮದಲ್ಲಿ ಇಂದು (ಜೂ.16) ಹಮ್ಮಿಕೊಂಡಿದ್ದ ನಿರಾಜಯೋಗಿ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭುಗಳ ದೇವಸ್ಥಾನ ಲೋಕಾರ್ಪಣೆ ಹಾಗೂ ಕಳಸಾರೋಹಣ ಮತ್ತು 44ನೇ ಪುಣ್ಯ ತಿಥಿ ಸಪ್ತಾಹದ ಉದ್ಘಾಟನೆ ನೆರವೇರಿಸಿ ಸಿಎಂ ಮಾತನಾಡಿದರು.

ಜಾತಿ ವ್ಯವಸ್ಥೆಯಿಂದಾಗಿಯೇ ಬ್ರಿಟಿಷರು ಈ ದೇಶ ಆಳಿದರು. ಈ ದೇಶಕ್ಕೆ ವ್ಯಾಪಾರ ಮಾಡಲು ಬಂದ ಬ್ರಿಟಿಷರು ಇದೇ ದೇಶದಲ್ಲಿ ಠಿಕಾಣಿ ಹೂಡಿದರು. ಅಂದು ಸುಮಾರು 560 ಸಂಸ್ಥಾನಗಳಿದ್ದವು. ಅವರೆಲ್ಲ ಒಬ್ಬರಿಗೊಬ್ಬರು ಕಾದಾಡುತ್ತಿದ್ದರು. ಕಾರಣ ನಮ್ಮ ಜಾತಿ ವ್ಯವಸ್ಥೆ ಎಷ್ಟು ಪ್ರಬಲವಾಗಿತ್ತು. ಈ ಜಾತಿ ವ್ಯವಸ್ಥೆ ಮಾಡಿದವರಾರು? ಚಾತುರ್ವರ್ಣ ಮಾಡಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರಿಗೆ ಎಲ್ಲ ಸವಲತ್ತು ಕೊಡಲಾಗಿತ್ತು. ಶಿಕ್ಷಣ, ಆಸ್ತಿ ಎಲ್ಲವೂ ಅವರಿಗಿತ್ತು. ಶೂದ್ರರಿಗೆ ಯಾವುದೇ ಸವಲತ್ತು ಇರಲಿಲ್ಲ. ಹೀಗಾಗಿ ಬ್ರಿಟಿಷರು ಈ ದೇಶ ಆಳಲು ಸುಲಭವಾಯಿತು. ಮಾಧವಾನಂದ ಸ್ವಾಮಿಜಿ ಇದನ್ನು ಅರಿತುಕೊಂಡೇ ಜಾತ್ಯತೀತ ತತ್ವ ಅಳವಡಿಸಿಕೊಂಡರು‌. ಹೀಗಾಗಿ ಅವರು ಪೂಜ್ಯನೀಯರಾದರು ಎಂದರು.

ಬಸವಣ್ಣ ಕೂಡ ಜಾತ್ಯತೀತ ತತ್ವ ಪ್ರತಿಪಾದನೆ ಮಾಡಿದರು. 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ಸಂದೇಶವನ್ನೇ 20ನೇ ಶತಮಾನದಲ್ಲಿ ಮಾಧವಾನಂದ ಸ್ವಾಮೀಜಿ ಹೇಳಿದರು. ಈ ಜಾತಿ ಪದ್ದತಿ ಹೋಗಲಾಡಿಸಬೇಕು. ಅದಕ್ಕಾಗಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು. ಆರ್ಥಿಕ ಸಬಲೀಕರಣಗೊಳ್ಳಬೇಕು ಎಂದರು.

ಈ ದೇಶ ಬಹುತ್ವದ ದೇಶ. ಅನೇಕ ಜಾತಿ, ಧರ್ಮ, ಭಾಷೆಗಳಿರುವ ದೇಶ ಇದು‌. ಯಾರು ಬಹುತ್ವವನ್ನು ಪಾಲನೆ ಮಾಡುತ್ತಾರೆ, ಗೌರವಿಸುತ್ತಾರೆ ಅಂತವರು ಮಾತ್ರ ಸ್ಮರಣಾರ್ಹರು ಎಂದರು. ಬಸವಣ್ಣನವರ ಫೋಟೊ ಪೂಜೆ ಮಾಡುತ್ತೇವೆ, ಆದರೆ ಅವರ ತತ್ವ ಪಾಲಿಸುತ್ತಿಲ್ಲ. ಜಾತಿ ವ್ಯವಸ್ಥೆಯ ಪರಿಣಾಮ, ಚಾತುರ್ವರ್ಣ ವ್ಯವಸ್ಥೆ ಪರಿಣಾಮ ಅಸಮಾನತೆ ಸೃಷ್ಠಿಯಾಗಿದೆ. ಹೀಗಾಗಿ ಸಮಾನತೆ ತರಲು ಅಂತರ್ಜಾತಿ ವಿವಾಹ, ಆರ್ಥಿಕ, ಸಾಮಾಜಿಕ‌ ಸಮಾನತೆ ತರುವುದೇ ಮಾರ್ಗ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ. ಅದರ ಮೇಲೆ ಜಾತಿ ಲೆಕ್ಕ ಹಾಕಿದರೆ ಹೇಗೆ?. ಅಧಿಕಾರ ಕೇವಲ ಬಲಾಢ್ಯರ ಕೈಗೆ ಇರಬಾರದು ಎಂಬುದು ಅಂಬೇಡ್ಕರ್ ಅವರ ಸಿದ್ದಾಂತವಾಗಿತ್ತು. ಬಲಾಢ್ಯರ ಕೈಗೆ ಅಧಿಕಾರ ಇದ್ದರೆ ಶೋಷಣೆ ಹಾಗೂ ದಬ್ಬಾಳಿಕೆ ಆರಂಭವಾಗುತ್ತದೆ. ಹೀಗಾಗಿ ಅಧಿಕಾರ ಹಂಚಿಕೆಯಾಗಬೇಕು. ಮನುಷ್ಯ ಮನುಷ್ಯನಾಗಿರಬೇಕು‌. ಪರಸ್ಪರ ಪ್ರೀತಿ ಸಬೇಕು, ಗೌರವಿಸಬೇಕು ಎಂದರು.

ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರಾದ ಎಂ.ಬಿ. ಪಾಟೀಲ ಮಾತನಾಡಿ, "ಇಂಚಗೇರಿ ಮಠದ ಸಂಪ್ರದಾಯ ಅನುಪಮ. ಸ್ವಾತಂತ್ರ್ಯ ಹೋರಾಟಕ್ಕೆ ಅಮೋಘ ಕೊಡುಗೆ ನೀಡಿದ್ದು ಇಂಚಗೇರಿ ಮಠ. ಈ ಮಠ ಕಾಂಗ್ರೆಸ್ ಮಠ ಎಂದೇ ಪ್ರಸಿದ್ಧಿ ಪಡೆದಿರುವಂಥದ್ದು. ಕಾಂಗ್ರೆಸ್ ಹಿರಿಯ ನಾಯಕರೆಲ್ಲರೂ ಈ ಮಠಕ್ಕೆ ಶ್ರದ್ಧೆ ಹಾಗೂ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಕೂಡ ಆಗಮಿಸಿರುವುದು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂಥದ್ದು" ಎಂದರು.

"ಚಡಚಣ ಏತ ನೀರಾವರಿ ಯೋಜನೆಗೆ 500 ಕೋಟಿ ರೂ. ಅನುದಾನ ನೀಡಲಾಗಿತ್ತು. 16 ಕೆರೆ ತುಂಬುವ ಯೋಜನೆ ಕೈಗೊಂಡಿದ್ದು, ಇದೀಗ ಆ ಯೋಜನೆ ಸಾಕಾರಗೊಳ್ಳುತ್ತಿದೆ. ಕೆಲವೇ ಕೆಲವು ತಿಂಗಳಲ್ಲಿ ಕೆರೆ ತುಂಬುವ ಯೋಜನೆಗೆ ಚಾಲನೆ ಸಿಗಲಿದೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಕೂಡ ರೂಪಿಸಲಾಯಿತು. ಇಂಥ ಅನೇಕ ಯೋಜನೆಗಳಿಂದ ಈ ಭಾಗ ಸಮೃದ್ಧವಾಗಲು ಕಾರಣ ಸಿದ್ದರಾಮಯ್ಯ ಸರ್ಕಾರ ಎಂದು ಸಿಎಂರನ್ನು ಗುಣಗಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net