

ಹುಬ್ಬಳ್ಳಿ: ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈ ಕುರಿತು ಮಾತನಾಡಿದ ಸಿಎಂ ಹೆಣ್ಣುಮಕ್ಕಳ ಮೇಲಾಗುವ ದೌರ್ಜನ್ಯವನ್ನು ನಾನು ತೀವ್ರವಾಗಿ ಖಂಡಿಸಿದ್ದೇನೆ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯಗಳು ಎಲ್ಲಿಯೂ ನಡೆಯಬಾರದು ಎಂದು ಹೇಳಿದ್ದಾರೆ.
ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಮಹಿಳೆಯ ಮೇಲಾದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಸತ್ಯಶೋಧನಾ ತಂಡದ ಭೇಟಿ ರಾಜಕೀಯ ಪ್ರೇರಿತ. ಈ ಪ್ರಕರಣದಲ್ಲಿ ಸರ್ಕಾರ ಕಾನೂನು ರೀತ್ಯ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಗೃಹಸಚಿವರು ಆಸ್ಪತ್ರೆಗೆ ತೆರಳಿ ಸಂತ್ರಸ್ಥೆಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನ್ಯಾಷನಲ್ ಕ್ರೈಂ ಬ್ಯೂರೋ ಪ್ರಕಾರ ಬಿಜೆಪಿ ಅವಧಿಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚು ನಡೆದಿವೆ. ಉತ್ತರಪ್ರದೇಶದ ಬಿಜೆಪಿಯ ಶಾಸಕರೊಬ್ಬರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ 25 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. ಇದರ ಬಗ್ಗೆ ನಡ್ಡಾ ಪ್ರತಿಕ್ರಿಯೆ ನೀಡಿದ್ದಾರ ಎಂದು ಪ್ರಶ್ನಿಸಿದ್ದಾರೆ.
ನವದೆಹಲಿಯ ಸಂಸತ್ ಭವನದಲ್ಲಿ ಭದ್ರತಾ ಲೋಪವಾಗಿರುವ ಬಗ್ಗೆ ಸಂಸತ್ತಿನ ವಿಪಕ್ಷಗಳು ರಾಜಕೀಯ ಎಲ್ಲಿ ಮಾಡುತ್ತಿವೆ. ಸಂಸತ್ತಿನಲ್ಲಿ ಭದ್ರತಾ ಲೋಪವಾಗಿರುವುದು ಸತ್ಯ. ಈ ಸತ್ಯವನ್ನು ಹೇಳಿದರೆ ರಾಜಕೀಯ ಹೇಗಾಗುತ್ತೆ. ಜಾತಿ ಗಣತಿ ವರದಿ ಇನ್ನೂ ಸರ್ಕಾರದ ಕೈಸೇರಿಲ್ಲ. ಹೀಗಾಗಿ ಯಾರಿಗೂ ಆ ವರದಿಯಲ್ಲಿರುವ ಅಂಶಗಳೇನು ಎಂಬ ಮಾಹಿತಿ ಇಲ್ಲ, ಕೇವಲ ಊಹೆಗಳ ಮೇಲೆ ಮಾತನಾಡುತ್ತಿದ್ದಾರೆ. ವರದಿ ಬಂದ ಮೇಲೆ ಸಾಧಕ - ಬಾಧಕಗಳೇನು ಎಂದು ತಿಳಿಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.