

ಬೆಂಗಳೂರು: ಉತ್ತರದಾಯಿತ್ವ ಇರುವ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಅಗತ್ಯ ನಮ್ಮ ದೇಶಕ್ಕೆ ಹೆಚ್ಚಾಗಿದೆ. ಉತ್ತರದಾಯಿತ್ವ ಇಲ್ಲದಿದ್ದರೆ ನಾವು ಈ ಸ್ಥಾನದಲ್ಲಿ, ಈ ಹುದ್ದೆಯಲ್ಲಿರಲು ಅನರ್ಹರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.
ಇನ್ಸೈಟ್ ಐಎಎಸ್ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಪಿಎಸ್ಸಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುವ ಹೊಣೆಗಾರಿಕೆ ಐಎಎಸ್, ಕೆಎಎಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಮೇಲಿರುತ್ತದೆ ಎಂದು ಹೇಳಿದರು.
ಸಮಾಜದಲ್ಲಿರುವ ಅಸಮಾನತೆಯಿಂದಾಗಿ ಬಹುಸಂಖ್ಯಾತ ಸಮುದಾಯ ಅಕ್ಷರ ಕಲಿಕೆಯಿಂದ ವಂಚಿತವಾಗಿದೆ. ಈ ಅಸಮಾನತೆಯನ್ನು ಅಳಿಸಲು ಸಾಧ್ಯವಾಗದಿದ್ದರೆ, ಆ ದಿಕ್ಕಿನಲ್ಲಿ ಶ್ರಮಿಸದಿದ್ದರೆ ನಾವು ಜನಪ್ರತಿನಿಧಿಗಳಾಗಿ, ಐಎಎಸ್-ಕೆಎಎಸ್ ಅಧಿಕಾರಿಗಳಾಗಿ ಏನು ಪ್ರಯೋಜನ ಎಂದು ಸಿಎಂ ಪ್ರಶ್ನಿಸಿದರು.
ಅಸಮಾನತೆ, ತಾರತಮ್ಯ ಅಳಿಸಲು ಯತ್ನಿಸದೇ ಹೋದರೆ ಈ ದೇಶದ ಜನರೇ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡುತ್ತಾರೆ ಎನ್ನುವ ಎಚ್ಚರಿಕೆಯ ಮಾತನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಈ ಎಚ್ಚರಿಕೆಯ ಮಾತನ್ನು ನೆನಪಿನಲ್ಲಿಟ್ಟುಕೊಂಡು ಅಸಮಾನತೆ, ತಾರತಮ್ಯವನ್ನು ಅಳಿಸಬೇಕು. ಹಸಿದವರಿಗೆ ಮಾತ್ರ ಊಟದ ಮಹತ್ವ ಗೊತ್ತಿರುತ್ತದೆ. ಹಸಿವಿನಿಂದ ನರಳುವವರಿಗೆ ನೆರವಾದರೆ ಮಾತ್ರ ಐಎಎಸ್, ಕೆಎಎಸ್ನಲ್ಲಿ ಟಾಪರ್ಸ್ ಆಗಿರುವುದಕ್ಕೂ ಸಾರ್ಥಕತೆ ಬರುತ್ತದೆ ಎಂದರು.
ಹೀಗಾಗಿ ಹಸಿವು ಗೊತ್ತಿರುವ ಹಳ್ಳಿ ಮಕ್ಕಳನ್ನು ಐಎಎಸ್ ಅಧಿಕಾರಿಗಳನ್ನಾಗಿ ಮಾಡಿ ಎಂದು ಇನ್ಸೈಟ್ ಸಂಸ್ಥೆಗೆ ಕಿವಿಮಾತು ಹೇಳಿದರು. ಇದನ್ನೂ ಓದಿ: ಭೂ ಬ್ಯಾಂಕ್ಗೆ ಮೇಜರ್ ಸರ್ಜರಿ: ಸಚಿವ ಎಂ.ಬಿ.ಪಾಟೀಲ್ ದೃಢವಿಶ್ವಾಸ, ಕೆಐಎಡಿಬಿ ಕಾರ್ಯಶೈಲಿಗೂ ಚುರುಕು
ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಇನ್ಸೈಟ್ ಸಂಸ್ಥೆಯ ನಿರ್ದೇಶಕರಾದ ವಿನಯ್ ಕುಮಾರ್ ಹಾಗೂ ಮಧುಕರ್ ನಾಗಣ್ಣ ಅವರು ಉಪಸ್ಥಿತರಿದ್ದು ಯುಪಿಎಸ್ಸಿ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು.