

ಚೀನಾ: ಪೂರ್ವ ಚೀನಾದ ಕಂಪನಿಯು ಇತ್ತೀಚೆಗೆ ವಿವಾಹೇತರ ಸಂಬಂಧಗಳನ್ನು ಹೊಂದಿರುವ ಉದ್ಯೋಗಿಗಳ ಮೇಲೆ ನಿಷೇಧವನ್ನು ಘೋಷಿಸಿದ್ದು, ಇದು ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಈ ನಿಷೇಧ, ಎಲ್ಲಾ ವಿವಾಹಿತ ಸಿಬ್ಬಂದಿಗಳಿಗೆ ಅನ್ವಯಿಸುತ್ತಿದ್ದು SCMP ಮಾಧ್ಯಮ ಪೋರ್ಟಲ್ನ ಪ್ರಕಾರ ಈ ಕಂಪನಿ ಇಂತಹ ಕಾನೂನಿನ ಮೂಲಕ ಕುಟುಂಬಕ್ಕೆ ನಿಷ್ಠೆಯಿಂದ ವರ್ತಿಸುವುದನ್ನು ಉತ್ತೇಜಿಸುತ್ತಾ ಉತ್ತಮ ಕೆಲಸದ ವಾತಾವರಣವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಆದಾಗ್ಯೂ, ನಿಷೇಧದ ಕಾನೂನುಬದ್ಧತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಇದು ನೌಕರರ ಹಕ್ಕುಗಳನ್ನು ಉಲ್ಲಂಘಿಸಬಹುದಾಗಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಝಜಿಯಾಂಗ್ ಮೂಲದ ಗುರುತು ಬಹಿರಂಗವಾಗದ ಈ ಕಂಪನಿಯು, ಜೂನ್ 9ರಂದು "ವಿವಾಹೇತರ ಸಂಬಂಧಗಳ" ನಿಷೇಧ ಆದೇಶವನ್ನು ಹೊರಡಿಸಿತು. ನಿಷೇಧವು ಆಂತರಿಕ ನಿರ್ವಹಣೆಯನ್ನು ಹೆಚ್ಚಿಸಲು, ವೈವಾಹಿಕ ನಿಷ್ಠೆಯ ಕಾರ್ಪೊರೇಟ್ ಸಂಸ್ಕೃತಿಯನ್ನು ಉತ್ತೇಜಿಸಲು, ಕುಟುಂಬಗಳನ್ನು ರಕ್ಷಿಸಲು ಮತ್ತು ಸುಧಾರಿಸಲು ಉದ್ದೇಶಿಸಿದೆ ಎಂದು ಕಂಪನಿಯ ದಾಖಲೆ ವಿವರಿಸಿದೆ.
ಈ ನಿಷೇಧವು ವಿವಾಹಿತ ಉದ್ಯೋಗಿಗಳಿಗೆ ಅನ್ವಯಿಸುತ್ತದೆ. ವಿವಾಹೇತರ ಸಂಬಂಧಗಳು ಅಥವಾ ಅನೇಕ ಪ್ರಿಯಕರ/ಪ್ರಿಯತಮೆಯರನ್ನು ನಿರ್ವಹಿಸುವಂತಹ ನಡವಳಿಕೆಗಳನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ನಿಯಮವನ್ನು ಉಲ್ಲಂಘಿಸುವವರು ಕಂಪನಿಯ ನಿಷೇಧವನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭ ಕಂಪನಿಯು ತನ್ನ ಸಿಬ್ಬಂದಿಯಲ್ಲಿ ಸರಿಯಾದ ಪ್ರೀತಿಯ ಮೌಲ್ಯಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿತು.
"ಈ ಷರತ್ತನ್ನು ಉಲ್ಲಂಘಿಸುವವರನ್ನು ವಜಾಗೊಳಿಸಲಾಗುವುದು. ಎಲ್ಲಾ ಸಿಬ್ಬಂದಿಗಳೂ ಯಾವುದೇ ಅಕ್ರಮ ಸಂಬಂಧವಿಲ್ಲದೇ, ಪ್ರೇಯಸಿಯಿಲ್ಲದೇ, ವಿವಾಹೇತರ ಸಂಬಂಧ ಮತ್ತು ವಿಚ್ಛೇದನವಿಲ್ಲದೇ ಸರಿಯಾದ ಪ್ರೀತಿಯ ಮೌಲ್ಯಗಳನ್ನು ಹೊಂದಿರುತ್ತಾರೆ. ಈ ಮೂಲಕ ಉತ್ತಮ ಉದ್ಯೋಗಿಗಳಾಗಲು ಪ್ರಯತ್ನಿಸಬಹುದು ಎಂದು ನಾವು ಭಾವಿಸುತ್ತೇವೆ.'' ಎಂದು ಕಂಪನಿಯು ಹೇಳಿದೆ. (ಏಜೆನ್ಸೀಸ್)