ಭೂ ಬ್ಯಾಂಕ್​ಗೆ ಮೇಜರ್ ಸರ್ಜರಿ: ಸಚಿವ ಎಂ.ಬಿ.ಪಾಟೀಲ್ ದೃಢವಿಶ್ವಾಸ, ಕೆಐಎಡಿಬಿ ಕಾರ್ಯಶೈಲಿಗೂ ಚುರುಕು

MB Patil
Published on

ಬೆಂಗಳೂರು: ಕೈಗಾರಿಕೆಗಳಿಗೆ ಭೂಮಿ ಕೊರತೆ ನಿವಾರಣೆ, ಕೃಷಿ ಕ್ಷೇತ್ರಕ್ಕೆ ನಷ್ಟ ತಪ್ಪಿಸಲು ಲ್ಯಾಂಡ್ ಬ್ಯಾಂಕ್​ಗೆ (ಭೂ ಭಂಡಾರ) ಮೇಜರ್ ಸರ್ಜರಿ ಮಾಡುವೆ. ಏಕಕಾಲಕ್ಕೆ ಎರಡೂ ವಲಯದ ಅಪಸ್ವರ ನೀಗಿಸುವೆ...

ಇದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರ ದೃಢ ವಿಶ್ವಾಸ. ‘ವಿಜಯವಾಣಿ’ ಕಚೇರಿಗೆ ಶನಿವಾರ ಸೌಜನ್ಯದ ಭೇಟಿ ನೀಡಿದ್ದ ಅವರು, ಔಪಚಾರಿಕ ಮಾತುಕತೆಯ ವೇಳೆ ಇಲಾಖೆಯ ತುರ್ತ, ತಾತ್ಕಾಲಿಕ, ದೀರ್ಘಾವಧಿ ಕ್ರಮಗಳ ಝುಲಕ್​ಗಳನ್ನು ಹಂಚಿಕೊಂಡರು. ರಾಜ್ಯಾದ್ಯಂತ ಭೂಬ್ಯಾಂಕ್ ಸಮಗ್ರ ಪರಿಶೋಧನೆ ನಡೆಸಿ, ವಸ್ತುಸ್ಥಿತಿ ವರದಿ ಸಲ್ಲಿಸಲು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳಿಗೆ ಸೂಚಿಸಿರುವೆ. ಸ್ವಾಧೀನವಾದ ಭೂಮಿ, ವರ್ಷ, ಬಳಕೆ, ಸದ್ಯದ ಸ್ಥಿತಿ, ವಿಳಂಬಕ್ಕೆ ಕಾರಣ ಇತ್ಯಾದಿ ವಿವರ ಒಳಗೊಂಡ ಮಾಹಿತಿ, ಅಂಕಿ-ಅಂಶಗಳ ವರದಿ ನಿರೀಕ್ಷಿಸಿರುವೆ. ಸಮಗ್ರ ವರದಿ ಬಯಸಿದ ಉದ್ದೇಶವನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡಿದ್ದಾರೆ. ಈ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸಲಿದ್ದು, ಪರಾಮಶಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿಟ್ಟು ಮುಂದಿನ ಕ್ರಮಗಳ ಬಗ್ಗೆ ಸಲಹೆ ಪಡೆಯುವೆ ಎಂದರು.

ಫಾಕ್ಸ್​ಕಾನ್ ಇವಿ ಘಟಕ ಸೆಳೆಯಲು ಪ್ರಯತ್ನ

ತೆರೆಮರೆ ಪ್ರಯತ್ನ ನಡೆಸಿ ಫಾಕ್ಸ್​ಕಾನ್ ಮೊಬೈಲ್ ಘಟಕ ರಾಜ್ಯದಲ್ಲೇ ಸ್ಥಾಪನೆಯಾಗುವಂತೆ ನೋಡಿಕೊಂಡು, ರ್ತಾಕ ಅಂತ್ಯ ಕಾಣಿಸಿದ್ದೇವೆ ಎಂದು ಎಂ.ಬಿ. ಪಾಟೀಲ್ ಸಂತಸ ವ್ಯಕ್ತಪಡಿಸಿದರು. ಫಾಕ್ಸ್​ಕಾನ್ ವಿದ್ಯುತ್ ವಾಹನ (ಇವಿ ವೆಹಿಕಲ್) ತಯಾರಿಕಾ ಘಟಕವನ್ನೂ ರಾಜ್ಯಕ್ಕೆ ಸೆಳೆಯುವ ಕಸರತ್ತು ನಡೆದಿದ್ದು, ಹೆಚ್ಚಿನ ವಿವರ ಸದ್ಯಕ್ಕೆ ಹಂಚಿಕೊಳ್ಳಲು ಬಯಸುವುದಿಲ್ಲ. ಚೀನಾಕ್ಕೆ ಬೆನ್ನು ತೋರಿಸಿರುವ ಪ್ರಮುಖ ಉದ್ಯಮಗಳು ವಿಯೆಟ್ನಾಂ, ಬಾಂಗ್ಲಾದೇಶ ಕಡೆಗೂ ಒಲವು ತೋರಿಸಿವೆ. ಭಾರತ ಅದರಲ್ಲೂ ಕರ್ನಾಟಕದಲ್ಲಿ ನೆಲೆಯೂರುವಂತೆ ಮಾಡಲು ಏನು ಸಾಧ್ಯವೋ ಆ ಪ್ರಯತ್ನ ಮಾಡುತ್ತೇವೆ. ಬೃಹತ್ ಉದ್ಯಮಗಳು, ಬಂಡವಾಳ ಹೂಡಿಕೆ ಆಕರ್ಷಣೆ ವಿಷಯದಲ್ಲಿ ರಾಜ್ಯಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಕೈಗಾರಿಕೆಸ್ನೇಹಿ, ಶಾಂತಿ ಮತ್ತು ಸೌಹಾರ್ದ ವಾತಾವರಣ ರಾಜ್ಯದ ಪ್ಲಸ್ ಪಾಯಿಂಟ್ ಎಂದು ಹೇಳಿದರು.

ಬೀಳುಬಿದ್ದ ಭೂಮಿ

ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಸಾವಿರಾರು ಎಕರೆ ಸ್ವಾಧೀನಪಡಿಸಿಕೊಂಡ ನಂತರ ನಿರೀಕ್ಷಿತ ಪ್ರಗತಿ ಕಾಣದೇ ಬೀಳುಬಿದ್ದಿರುವ ನಿದರ್ಶನವಿದ್ದು, ವಿಜಯಪುರ ಸೇರಿ ಹಲವು ಜಿಲ್ಲೆಗಳಲ್ಲಿ ಉದಾಹರಣೆ ಸಿಗುತ್ತವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ಕೆಲವು ಇಲಾಖೆಗಳ ತೀರುವಳಿ ವಿಳಂಬದಿಂದ ಕೈಗಾರಿಕೆ ಸ್ಥಾಪನೆ ತಡವಾದ ಉದಾಹರಣೆಗಳು ಬೆರಳೆಣಿಕೆಯಷ್ಟಿವೆ. ಒಟ್ಟಾರೆ ಕೈಗಾರಿಕೆಗಳಿಗೆ ಕಾದಿಟ್ಟ ಭೂಮಿ ಬಳಕೆ ತೃಪ್ತಿಕರವಾಗಿಲ್ಲ. ಸಾಗುವಳಿ ಜಮೀನು ಕಡಿಮೆಯಾಗುತ್ತಿದೆ ಎಂಬ ದೂರುಗಳಿದ್ದು, ವಸ್ತುಸ್ಥಿತಿ ವರದಿಯು ಪರಿಹಾರ ಒದಗಿಸಲಿದೆ. ಜತೆಗೆ ಬೆಂಗಳೂರಿನಾಚೆ ಉದ್ಯಮದ ಬೆಳವಣಿಗೆ, ತಯಾರಿಕಾ ವಲಯಕ್ಕೆ ಒತ್ತು ನೀಡಲೆಂದು ಏಳು ಕೈಗಾರಿಕಾ ಕ್ಲಸ್ಟರ್​ಗಳನ್ನು ಸ್ಥಾಪಿಸಲಾಗಿದೆ ಎಂದರು.

ಏಕಗವಾಕ್ಷಿ

ಕೆಎಐಡಿಬಿ ಕಾರ್ಯಶೈಲಿ ಚುರುಕುಗೊಳಿಸಲು ಹೆಚ್ಚಿನ ಆದ್ಯತೆ ನೀಡಿರುವೆ. ಕೈಗಾರಿಕೆಗಳಿಗೆ ಜಮೀನು ಹಂಚಿಕೆ ವಿಷಯದಲ್ಲಿ ನಾಲ್ಕು ಹಂತಗಳನ್ನು ಅಳವಡಿಸಿ, ನೈಜ ಉದ್ದೇಶ ಈಡೇರುವಂತೆ ಗಮನ ನೀಡಲಾಗುತ್ತದೆ. ಪಂಜಾಬ್, ತಮಿಳುನಾಡು ಇನ್ನೂ ಕೆಲವು ರಾಜ್ಯಗಳ ಏಕಗವಾಕ್ಷಿ ಮಾದರಿ ಅಧ್ಯಯನ ಮಾಡಲಾಗುತ್ತಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಅನುಮತಿ ಅಥವಾ ತೀರುವಳಿಗಳನ್ನು ತ್ವರಿತವಾಗಿ ನೀಡಿ ಉದ್ಯಮಿಗಳಿಗೆ ಅನುಕೂಲ ಹಾಗೂ ಸಕಾಲಕ್ಕೆ ಉದ್ದೇಶಿತ ಭೂಬಳಕೆಗೆ ಆಸ್ಥೆ ವಹಿಸಲಾಗಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದರು. ವಿದ್ಯುತ್ ದರ ಏರಿಕೆ ಬೃಹತ್ ಉದ್ಯಮಗಳಿಗೆ ಬಾಧಿಸುವುದಿಲ್ಲ. ಬೃಹತ್ ಉದ್ಯಮಗಳು ಸೌರಶಕ್ತಿ ಇನ್ನಿತರ ಮೂಲಗಳ ವಿದ್ಯುತ್ ಉತ್ಪಾದಕರ ಜತೆಗೆ ನೇರ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳುತ್ತವೆ ಎಂದು ಹೇಳಿದರು.

ವಿಮಾನಯಾನ ಪ್ರಾಧಿಕಾರ ಸ್ಥಾಪನೆ ಚಿಂತನೆ

ಮಹಾರಾಷ್ಟ್ರ ಸರ್ಕಾರ ವಿಮಾನಯಾನ ಪ್ರಾಧಿಕಾರ ಸ್ಥಾಪಿಸಿ, ಮುಂಬೈ-ಶಿರಡಿಗೆ ವಿಮಾನಯಾನ ಸೇವೆ ಪ್ರಾರಂಭಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಪ್ರಾಧಿಕಾರ ಸ್ಥಾಪಿಸುವ ಚಿಂತನೆಯಿದೆ ಎಂದು ಎಂ.ಬಿ. ಪಾಟೀಲ್ ಹೇಳಿದರು. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದಾಗ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಸುಳಿವು ಸಿಕ್ಕಿದೆ ಎಂದರು. ವಿಮಾನ ನಿಲ್ದಾಣ ನಿರ್ವಣಕ್ಕೆ ಬೇಕಾದ ಭೂಮಿ, ನೀರು, ವಿದ್ಯುತ್ ರಾಜ್ಯ ಸರ್ಕಾರವೇ ಭರಿಸುತ್ತದೆ. ನಿರ್ಮಾಣ ಪೂರ್ಣಗೊಂಡ ನಂತರ ಕೇಂದ್ರ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಆದಾಯವಿಲ್ಲದಿದ್ದರೂ ಅಗತ್ಯ ಸವಲತ್ತುಗಳ ನಿರ್ವಹಣೆ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು. ಈ ಮಧ್ಯೆ ನಿರ್ವಹಣೆ ಕಷ್ಟಸಾಧ್ಯವೆಂದು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಕಂಪನಿಗೆ ಕೊಟ್ಟಿದೆ. ಖಾಸಗಿ ಕಂಪನಿಗೆ ಕೊಡುವ ಬದಲು ರಾಜ್ಯಕ್ಕೆ ವಹಿಸಿದರೆ ಭೂಮಿ ಸೇರಿ ಮಾಡಿದ್ದ ವೆಚ್ಚ ವಾಪಸ್ ಪಡೆಯಲು ಸಾಧ್ಯವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಕ್ಷಮ ಮತ್ತೊಮ್ಮೆ ರ್ಚಚಿಸಿ ಪ್ರಾಧಿಕಾರಕ್ಕೆ ಸ್ಪಷ್ಟ ರೂಪ ನೀಡುವ ಉದ್ದೇಶವಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net