ಮರಳು ದಂಧೆಕೋರರಿಂದ ಹೆಡ್​ ಕಾನ್​ಸ್ಟೆಬಲ್ ಹತ್ಯೆ ಪ್ರಕರಣ: ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್​

KLB Police Suspend
Published on

ಕಲಬುರಗಿ: ಮರಳು ದಂಧೆಕೋರರಿಂದ ಹೆಡ್ ಕಾನ್​ಸ್ಟೆಬಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಜೇವರ್ಗಿ ಠಾಣೆಯ ಸಿಪಿಐ ಭೀಮನಗೌಡ್ ಬಿರಾದರ್, ನೆಲೋಗಿ ಠಾಣೆಯ ಪಿಎಸ್​ಐ ಗೌತಮ್ ಗುತ್ತೆದಾರ್ ಮತ್ತು ಕಾನ್​ಸ್ಟೆಬಲ್ ರಾಜಶೇಖರ ಎಂಬುವರನ್ನು ಅಮಾನತು ಮಾಡಿ ಕಲಬರಗಿ ಪೊಲೀಸ್​ ವರಿಷ್ಠಾಧಿಕಾರಿ (ಎಸ್ಪಿ) ಇಶಾ ಪಂತ್ ಅವರು ಆದೇಶ ಹೊರಡಿಸಿದ್ದಾರೆ.

ಜೇವರ್ಗಿ ತಾಲೂಕಿನ ಹುಲ್ಲೂರ್ ಬಳಿ ಅಕ್ರಮವಾಗಿ ಮರಳು ಶೇಖರಣೆ ಮಾಡಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಆದರೂ ಇನ್ಸ್​ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಮಾಡಿರಲಿಲ್ಲ. ದಂಧೆಕೋರರು ಪ್ರತಿನಿತ್ಯ ಹುಲ್ಲೂರ್ ಸ್ಟಾಕ್ ಯಾರ್ಡ್​ನಿಂದ ಅಕ್ರಮವಾಗಿ ಮರಳು ಪೂರೈಕೆ ಮಾಡುತ್ತಿದ್ದರು. ನೆಲೋಗಿ ಪಿಎಸ್ಐ ಗೌತಮ್ ಕೂಡ ಸ್ಪಾಟ್ ವಿಸಿಟ್ ಮಾಡಿರಲಿಲ್ಲ.

ಇನ್​​ಸ್ಪೆಕ್ಟರ್​ ಹಾಗೂ ಸಬ್​ ಇನ್ಸ್​ಪೆಕ್ಟರ್​ ಕೇವಲ ಇಬ್ಬರು ಸಿಬ್ಬಂದಿಯನ್ನು ಮಾತ್ರ ಬಂದೋಬಸ್ತ್​ಗೆ ನಿಯೋಜನೆ‌ ಮಾಡಿದ್ದರು. ಜೂನ್ 15 ರಂದು ನೆಲೋಗಿ ಠಾಣೆಯ ಹೆಡ್ ಕಾನ್ಸ್​ಟೆಬಲ್ ಮೈಸೂರ್ ಚೌಹಾಣ್ ಅವರು ಮರಳು ದಂಧೆ ತಡಯಲು ಹೋದಾಗ ಅವರ ಮೇಲೆ ದಂಧೆಕೋರರು ಟ್ರ್ಯಾಕ್ಟರ್​ ಹರಿಸಿ ಹತ್ಯೆ ಮಾಡಿದ್ದರು.

ಈ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ನಡೆದಿತ್ತು. ಇದೀಗ ಈ ಪ್ರಕರಣ ಸಂಬಂಧ ಮೂವರು ಸಿಬ್ಬಂದಿಯನ್ನು ಎಸ್ಪಿ ಸಸ್ಪೆಂಡ್​ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net