

ಕಲಬುರಗಿ: ಕಲ್ಯಾಣ ಕರ್ನಾಟಕದ ಸಮಗ್ರ ಪ್ರಗತಿಗಾಗಿ ಸಂವಿಧಾನದ 371(ಜೆ) ವಿಧಿ ಪರಿಣಾಮಕಾರಿ ಅನುಷ್ಠಾನಗೊಳಿಸುವ ಸಂಬಂಧ ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಜತೆಗೆ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್ಡಿಬಿ) ವಿಶೇಷ ಇಂಜಿನಿಯರಿಂಗ್ ವಿಭಾಗ ಮಂಜೂರು ಮಾಡುವುದಾಗಿ ಸಿಎಂ ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಪ್ರಯುಕ್ತ ವಿಮೋಚನಾ ರೂವಾರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿ ಸಿಎಂ ಸಿದ್ದರಾಮಯ್ಯ ಗೌರವ ಸಲ್ಲಿಸಿದರು. ಬಳಿಕ ಪೊಲೀಸ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೆಕೆಆರ್ಡಿಬಿ ಅಡಿ ಪ್ರತ್ಯೇಕ ಇಂಜಿನಿಯರಿಂಗ್ ವಿಭಾಗ ಸ್ಥಾಪಿಸಬೇಕೆಂಬ ಪ್ರಸ್ತಾವನೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಿಂದ ಈ ಭಾಗದ ಜನರ ಹಲವಾರು ಕೆಲಸಗಳು ಇಲ್ಲಿಯೇ ಆಗಲಿವೆ. ಬೆಂಗಳೂರಿನಲ್ಲಿರುವ ಸಂವಿಧಾನದ 371(ಜೆ) ಕೋಶದ ಕಚೇರಿಯನ್ನು ಕಲಬುರಗಿಗೆ ಸ್ಥಳಾಂತರಿಸಲಾಗುವುದು. ಹಿಂದಿನ ಸರ್ಕಾರ ಈ ಕುರಿತು ಕೇವಲ ಆದೇಶ ಹೊರಡಿಸಿ ಕೈತೊಳೆದುಕೊಂಡಿತ್ತು. ಆದರೆ ನಾವು ಕೆಲಸ ಮಾಡುವ ಮೂಲಕ ಪ್ರಾಮಾಣಿಕತೆ ಮೆರೆಯುತ್ತಿದ್ದೇವೆ ಎಂದರು. ಜನರ ಬೇಡಿಕೆಯಂತೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ಬಗ್ಗೆ ಚರ್ಚೆ ನಡೆಸಿ ಆದಷ್ಟು ಶೀಘ್ರ ದಿನಾಂಕ ನಿಗದಿ ಮಾಡಲಾಗುವುದು. ಇಲ್ಲಿ ಕ್ಯಾಬಿನೆಟ್ ಮೀಟಿಂಗ್ ಜತೆಗೆ ನಿಜಾರ್ಥದಲ್ಲಿ ಈ ಭಾಗದ ಅಭಿವೃದ್ಧಿಗೆ ನೀಲಿನಕ್ಷೆ ರೂಪಿಸಲು ಸೂಚಿಸಲಾಗಿದೆ. ಈಗಾಗಲೇ ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಮಂಡಳಿಯ ಮೊದಲ ಸಭೆ ನಡೆಸಿ ಕ್ರಿಯಾಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 26 ಸಾವಿರ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಕೆಕೆಆರ್ಡಿಬಿಯಿಂದ ಈ ಸಲ ಶಿಕ್ಷಣ ವರ್ಷ ಎಂದು ಘೊಷಿಸಿ ಪರೀಕ್ಷೆ ಫಲಿತಾಂಶ ವೃದ್ಧಿಸಲು 7 ಜಿಲ್ಲೆಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2619 ಅತಿಥಿ ಶಿಕ್ಷಕರನ್ನು ಅಕ್ಷರ ಮಿತ್ರ ಎಂದು ನೇಮಿಸಲಾಗುತ್ತಿದೆ. ಮಾಸಾಂತ್ಯದೊಳಗೆ ನೇಮಕ ಪ್ರಕ್ರಿಯೆ ಮುಗಿಯಲಿದ್ದು, -ಠಿ;20 ಕೋಟಿ ನೀಡಲಾಗಿದೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ