

ಕೋಲ್ಕತ: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರೀಗ ಉದ್ಯಮಿಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಶೀಘ್ರದಲ್ಲೇ ಬಂಗಾಳದಲ್ಲಿ ಉಕ್ಕಿನ ಕಾರ್ಖಾನೆ ಆರಂಭಿಸಲಿದ್ದೇನೆ ಎಂದು ಗಂಗೂಲಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆಗೆ ಸ್ಪೇನ್-ದುಬೈಗೆ 12 ದಿನಗಳ ಪ್ರವಾಸಕ್ಕೆ ತೆರಳಿರುವ ಗಂಗೂಲಿ, ಇದೇ ವೇಳೆ ಈ ಘೋಷಣೆ ಮಾಡಿದ್ದು, ಪಶ್ಚಿಮ ಮೇದಿನಿಪುರದ ಸಲ್ಬೋನಿಯಲ್ಲಿ ಇನ್ನು 5-6 ತಿಂಗಳಲ್ಲಿ ಕಾರ್ಖಾನೆ ಸಿದ್ಧವಾಗಲಿದೆ ಎಂದಿದ್ದಾರೆ. 2007ರಲ್ಲೇ ನಮ್ಮ ಕುಟುಂಬ ಸಣ್ಣ ಉಕ್ಕಿನ ಸ್ಥಾವರ ಸ್ಥಾಪಿಸಿತ್ತು. ಅಲ್ಲದೆ, ನನ್ನ ಅಜ್ಜ 50-60 ವರ್ಷಗಳ ಹಿಂದೆಯೇ ಉಕ್ಕಿನ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಈಗ ರಾಜ್ಯ ಸರ್ಕಾರದ ಬೆಂಬಲದೊಂದಿಗೆ ದೊಡ್ಡ ಹೆಜ್ಜೆ ಇಡುತ್ತಿದ್ದೇವೆ ಎಂದು ಗಂಗೂಲಿ ತಿಳಿಸಿದ್ದಾರೆ.
ಗಂಗೂಲಿ ವಿದೇಶಿ ಪ್ರವಾಸದ ವೇಳೆ ಈ ಘೋಷಣೆ ಮಾಡಿರುವುದನ್ನು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ್ ಮಜುಮ್ದಾರ್ ಟೀಕಿಸಿದ್ದಾರೆ.