ಡೇವಿಸ್​ ಕಪ್​ಗೆ ಕನ್ನಡಿಗ ರೋಹನ್​ ಬೋಪಣ್ಣ ಗೆಲುವಿನ ವಿದಾಯ

bopanna web
Published on

ಲಖನೌ: ಭಾರತದ ಅನುಭವಿ ಆಟಗಾರ ಹಾಗೂ ಕನ್ನಡಿಗ ರೋಹನ್​ ಬೋಪಣ್ಣ ಪ್ರತಿಷ್ಠಿತ ಡೇವಿಸ್​ ಕಪ್​ ಟೆನಿಸ್​ ಟೂರ್ನಿಗೆ ಗೆಲುವಿನ ವಿದಾಯ ಸಾರಿದ್ದಾರೆ. ಯೂಕಿ ಭಾಂಬ್ರಿ ಜತೆಗೂಡಿ ಡಬಲ್ಸ್​ ಪಂದ್ಯದಲ್ಲಿ ನೇರಸೆಟ್​ ಗೆಲುವು ದಾಖಲಿಸಿದ ಬೋಪಣ್ಣ, ವಿಶ್ವಗುಂಪು-2ರ ಪಂದ್ಯದಲ್ಲಿ ಪ್ರವಾಸಿ ಮೊರಾಕ್ಕೊ ಎದುರು ಭಾರತಕ್ಕೆ 4-1ರಿಂದ ಜಯ ಸಾಧಿಸಲು ನೆರವಾದರು. ಈ ಮೂಲಕ ಭಾರತ ತಂಡ ಮುಂದಿನ ವರ್ಷ ವಿಶ್ವಗುಂಪು-1ರ ಪ್ಲೇಆಫ್​​ನಲ್ಲಿ ಆಡುವ ಅವಕಾಶ ಸಂಪಾದಿಸಿದೆ.

ಮೊದಲ ದಿನ 1-1ರಿಂದ ಸಮಬಲ ಕಂಡಿದ್ದ ಆತಿಥೇಯ ಭಾರತಕ್ಕೆ 2ನೇ ದಿನವಾದ ಭಾನುವಾರ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಜೋಡಿ ಮುನ್ನಡೆ ಒದಗಿಸಿತು. ಬೋಪಣ್ಣ-ಯೂಕಿ ಜೋಡಿ 6-2, 6-1 ನೇರಸೆಟ್​ಗಳಿಂದ ಎಲಿಯಟ್​ ಬೆಂಚೆಟ್ರಿ ಮತ್ತು ಯೂನೆಸ್​ ಲಾರೌಸಿ ಜೋಡಿಯನ್ನು ಒಂದು ಗಂಟೆ 11 ನಿಮಿಷಗಳಲ್ಲೇ ಪರಾಭವಗೊಳಿಸಿತು. ಇದರೊಂದಿಗೆ 43 ವರ್ಷದ ಬೋಪಣ್ಣ ಡೇವಿಸ್​ ಕಪ್​ನ 33ನೇ ಹಾಗೂ ಕೊನೇ ಮುಖಾಮುಖಿಯಲ್ಲಿ ಗೆಲುವಿನ ಸಂಭ್ರಮ ಕಂಡರು.

ಭಾರತದ ನಂ. 1 ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್​ ಮೊದಲ ರಿವರ್ಸ್​ ಸಿಂಗಲ್ಸ್​ ಪಂದ್ಯದಲ್ಲಿ ಯಾಸಿನ್​ ಡ್ಲಿಮಿ ಎದುರು 6&3, 6&3 ನೇರಸೆಟ್​ಗಳಿಂದ ಗೆದ್ದರು. ಇದರೊಂದಿಗೆ ಭಾರತ ಮತ್ತೆ ವಿಶ್ವಗುಂಪು-2ರಿಂದ ಮೇಲೇರುವುದು ಖಚಿತಗೊಂಡಿತು.

ಔಪಚಾರಿಕವೆನಿಸಿದ 2ನೇ ರಿವರ್ಸ್​ ಸಿಂಗಲ್ಸ್​ ಪಂದ್ಯದಲ್ಲಿ ಯುವ ಆಟಗಾರ ದಿಗ್ವಿಜಯ್​ ಪ್ರತಾಪ್​ ಸಿಂಗ್​ರನ್ನು ಭಾರತ ಕಣಕ್ಕಿಳಿಸಿತು. ಪದಾರ್ಪಣೆಯ ಪಂದ್ಯದಲ್ಲಿ ದಿಟ್ಟ ಹೋರಾಟ ತೋರಿದ 23 ವರ್ಷದ ದಿಗ್ವಿಜಯ್​ ಪ್ರತಾಪ್​ 6-1, 5-7, 10-6ರಿಂದ ಮೊರಾಕ್ಕೊದ ವಾಲಿದ್​ ಅಹೌದಾ ಎದುರು 1 ಗಂಟೆ, 48 ನಿಮಿಷಗಳಲ್ಲಿ ಗೆಲುವು ದಾಖಲಿಸಿದರು.

ಬೋಪಣ್ಣ ಭಾವುಕ ನಿವೃತ್ತಿ

ದಿಗ್ಗಜರಾದ ಲಿಯಾಂಡರ್​ ಪೇಸ್​, ಮಹೇಶ್​ ಭೂಪತಿ ನೆರಳಿನಲ್ಲಿ ಆಡುತ್ತ ಇತ್ತೀಚೆಗಿನ ವರ್ಷಗಳಲ್ಲಿ ಭಾರತ ಡೇವಿಸ್​ ಕಪ್​ ತಂಡದ ಪ್ರಮುಖ ಸದಸ್ಯರೆನಿಸಿದ್ದ ರೋಹನ್​ ಬೋಪಣ್ಣ, ಕೊನೇ ಪಂದ್ಯ ಆಡಿದ ಬಳಿಕ ಭಾವುಕರಾದರು. ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ ಬೋಪಣ್ಣರನ್ನು ತಂಡದ ಸದಸ್ಯರು ಭುಜದ ಮೇಲೆ ಹೊತ್ತು ಗೌರವ ಸಲ್ಲಿಸಿದರು. ಕೊಡಗಿನಿಂದ ಆಗಮಿಸಿದ ಬೋಪಣ್ಣರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಕೂಡ ಕ್ರೀಡಾಂಗಣದಲ್ಲಿ ಹಾಜರಿದ್ದರು. ಅವರೆಲ್ಲರೂ ಬೋಪಣ್ಣ ಚಿತ್ರವಿದ್ದ ವಿಶೇಷ ಟಿ-ಶರ್ಟ್​ ಧರಿಸಿದ್ದರು. ಮುಂಬರುವ ಏಷ್ಯನ್​ ಗೇಮ್ಸ್​ನಲ್ಲೂ ಸ್ಪರ್ಧಿಸಲಿರುವ ಬೋಪಣ್ಣ ನಂತರ ಎಟಿಪಿ ಟೂರ್ನಿಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net