ಸಾಲ ಮಾಡಿಯಾದ್ರೂ ಯುಕೆಪಿ 3 ನೇ ಹಂತದ ಯೋಜನೆ ಪೂರ್ಣ‌ಗೊಳಿಸ್ತೇವೆಂದ ಸಿಎಂ

cm yediyurappa
Published on

ವಿಜಯಪುರ: ಸಾಲ ಮಾಡಿಯಾದರೂ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3 ರ ಕಾಮಗಾರಿ ಪೂರ್ಣಗೊಳಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದರು. ಮಂಗಳವಾರ ಮಳೆ ಹಾಗೂ ನೆರೆ ಹಾನಿಗೆ ಸಂಬಂಧಿಸಿದಂತೆ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿ ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಆಲಮಟ್ಟಿ ಅಣೆಕಟ್ಟು ಎತ್ತರವನ್ನು524.256 ಮೀಟರ್ ಗೆ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಈಗಾಗಲೇ ರಾಜ್ಯ ಜಲಸಂಪನ್ಮೂಲ ಸಚಿವರು ಕೇಂದ್ರದ ಜಲಸಂಪನ್ಮೂಲ ಇಲಾಖೆ ಸಭೆಯಲ್ಲಿ ಭಾಗವಹಿಸಿ ಈ ಬಗ್ಗೆ ಗಮನ ಸೆಳೆದಿದ್ದಾರೆ. ಕೃಷ್ಣಾ ನ್ಯಾಯಾಧೀಕರಣ ತೀರ್ಪು ಆದಷ್ಟು ಬೇಗ ಹೊರಬಿದ್ದರೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದ್ದಾರೆ. ಆದರೆ, ಕರೋನಾ ಹಿನ್ನೆಲೆ ಸಾಕಷ್ಟು ಹಣಕಾಸಿನ ಅಡಚಣೆ ಎದುರಾಗಿದೆ. ಅದಾಗ್ಯೂ ಎಲ್ಲ ಕಾಮಗಾರಿಗೆ ಅನುದಾನ ಒದಗಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರಲ್ಲದೇ ಗ್ರಾಮಗಳ ಸ್ಥಳಾಂತರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಬೆಳೆ ಹಾನಿ, ರಸ್ತೆ ದುರಸ್ಥಿಗೆ ಹೆಚ್ಚಿನ ಹಣ ಈ ಭಾಗಕ್ಕೆ ನೀಡಲಾಗುವುದು ಎಂದರು.

ಶ್ವೇತಪತ್ರವೇಕೆ ಚರ್ಚೆಗೆ ಅವಕಾಶ: ಕರೊನಾ ನಿಯಂತ್ರಣದಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿದ್ದು ಈ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂಬುದು ಪ್ರತಿಪಕ್ಷಗಳ ಒತ್ತಾಯವಾಗಿದೆಯಲ್ಲ ಎಂಬ ಪ್ರಶ್ನೆಗೆ, ಶ್ವೇತ ಪತ್ರವೇಕೆ? ಸದನದಲ್ಲೇ ಚರ್ಚೆಗೆ ಅವಕಾಶ ಕೊಡುವುದಾಗಿ‌ ಸಿಎಂ ಪ್ರತಿಕ್ರಿಯಿಸಿದರಲ್ಲದೇ ಕರೊನಾ‌ ನಿಯಂತ್ರಣದಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದರು.

ತಳವಾರ- ಪರಿವಾರ ಸಮಸ್ಯೆ ಗೊಂದಲ: ಇನ್ನು ತಳವಾರ ಮತ್ತು ಪರಿವಾರ ಸಮುದಾಯ ವನ್ನು ಎಸ್ ಟಿಗೆ ಸೇರಿಸಬೇಕೆಂದು ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಿದ್ದರೂ ರಾಜ್ಯದಲ್ಲಿ ಅನುಷ್ಟಾನ ವಿಳಂಬಕ್ಕೆ ಕಾರಣವೇನು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ಕೇಂದ್ರ ಗೆಜೆಟ್ ಹೊರಡಿಸಿದ್ದು ಸರಿ. ಅದರಲ್ಲಿ ನಾಯಕ ಪದದ ಪರ್ಯಾಯ ಪದ ತಳವಾರ ಮತ್ತು ಪರಿವಾರ ಎಂದಿದೆ. ಆದರೆ ಇದರಲ್ಲಿ ಕೆಲವು ಗೊಂದಲ ಇದ್ದು ಆ ಬಗ್ಗೆ ಶೀಘ್ರದಲ್ಲಿ ಪರಿಹರಿಸಲು ಕೋರಿಕೊಳ್ಳಲಾಗಿದೆ ಎಂದು ಪ್ರತಿಕ್ರಿಯಿಸಿದರು. ಅಲ್ಲದೇ ಈಗಾಗಲೇ ಶೈಕ್ಷಣಿಕ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ಸಮುದಾಯದ ಮಕ್ಕಳು ತೀವ್ರ ತೊಂದರೆಗೆ ಸಿಲುಕಿದ್ದಾರೆಂಬ ಪ್ರಶ್ನೆಗೆ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಪಡಿಸಿವುದಾಗಿ ತಿಳಿಸಿ ನಿರ್ಗಮಿಸಿದರು.

ಡಿಸಿಎಂ ಗೋವಿಂದ ಕಾರಜೋಳ, ರಮೇಶ ಜಾರಕಿಹೊಳಿ, ಸಿ.ಸಿ. ಪಾಟೀಲ, ಸಚಿವ ಆರ್‌. ಅಶೋಕ, ಬಸವರಾಜ ಬೊಮ್ಮಾಯಿ, ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಮುರಗೇಶ‌ ನಿರಾಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net