

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಶೀರ್ವಾದದಿಂದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಐಪಿಎಸ್ ಅಧಿಕಾರಿಗಳ ಸಮಾವೇಶದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದರು.
ಹುಬ್ಬಳ್ಳಿ- ಧಾರವಾಡದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಸ್ಪಷ್ಟವಾದ ಬಹುಮತ ಪಡೆದುಕೊಳ್ಳುವಂತಹ ಎಲ್ಲ ಸಾಧ್ಯತೆಗಳಿವೆ. ಕಲಬುರಗಿಯಲ್ಲಿ ಸಹ ನಂಬರ್ ಒನ್ ಪಾರ್ಟಿ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಎಲ್ಲ ಮಹಾನಗರ ಪಾಲಿಕೆಯ ಅಧ್ಯಕ್ಷರುಗಳಿಗೆ, ಹಿರಿಯ ನಾಯಕರು, ಶಾಸಕರು, ಮಂತ್ರಿಗಳು, ಕಾರ್ಯಕರ್ತರಿಗೆ ಹಾಗೂ ಸಂಪೂರ್ಣವಾಗಿ ಪ್ರಚಾರ ಮಾಡಿರುವಂತಹ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರವಿಕುಮಾರ್, ಅರುಣ್ ಕುಮಾರ್‌ಗೆ ಧನ್ಯವಾದ ಸಮರ್ಪಿಸುವುದಾಗಿ ಸಿಎಂ ಹೇಳಿದ್ದಾರೆ.
ಮತದಾರರು ನಮ್ಮ ಮೇಲೆ ಮತ್ತೊಮ್ಮೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಕಳೆದ ಬಾರಿ ಬೆಳಗಾವಿಯಲ್ಲಿ ಬಹಳ ಕಡಿಮೆ ಸೀಟು ಇತ್ತು. ಆದರೆ ಈ ಬಾರಿ ಅದ್ಭುತ ಪ್ರದರ್ಶನ ಆಗಿದೆ. ಬಹಳಷ್ಟು ವಿಶ್ಲೇಷಣೆಗಳು ಕೇಳಿ ಬಂದಿದ್ದವು. ಆದರೆ ಅವೆಲ್ಲವನ್ನೂ ಮತದಾರರು ಹುಸಿಗೊಳಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ನಮ್ಮ ಬಿಜೆಪಿಯ ಕೋಟೆಯಾಗಿದೆ. ಅದನ್ನು ಸುಭದ್ರವಾಗಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ.
ಒಟ್ಟಾರೆಯಾಗಿ ಸರ್ಕಾರ ಬಂದು ಒಂದು ತಿಂಗಳಲ್ಲಿ ನಡೆದ ಈ ಚುನಾವಣೆಯಲ್ಲಿ ಪ್ರಥಮ ಸೂಚನೆಯನ್ನು ನೀಡಿದ್ದು, ಜನಮನ್ನಣೆ ನೀಡುವ ಮೂಲಕ ಸರ್ಕಾರಕ್ಕೆ ಜನರು ಬೆಂಬಲ ಕೊಟ್ಟಿದ್ದಾರೆ. ಇದು ಮುಂದಿನ ದಿನಗಳಿಗೆ ದಿಕ್ಸೂಚಿ ಆಗಿದೆ. ಯಡಿಯೂರಪ್ಪ ಆಶೀರ್ವಾದ ಹಾಗೂ ನಡ್ಡಾಜಿ, ಅಮಿತ್ ಷಾ ಹಾಗೂ ಮೋದಿಯವರ ಹೆಸರು, ಪ್ರೇರಣೆಯಿಂದ ಗೆಲುವು ಸಾಧಿಸಿದ್ದೇವೆ ಎಂದರು.