ಯಾವ ಪದನಾಮಗಳೂ ಶಾಶ್ವತವಲ್ಲ, ಬಸವರಾಜ ಬೊಮ್ಮಾಯಿ ಅನ್ನೋದಷ್ಟೇ ಶಾಶ್ವತ!

bommai
Published on

ಹಾವೇರಿ: ಮುಖ್ಯಮಂತ್ರಿ ಸ್ಥಾನಕ್ಕೆ ಕೆಲವರು ತೆರೆಮರೆಯಲ್ಲಿ ಪ್ರಯತ್ನಗಳು ನಡೆಸುತ್ತಿರುವುದು ಮತ್ತು ಮುಖ್ಯಮಂತ್ರಿಯ ಬದಲಾವಣೆ ಆಗಲಿದೆ ಎಂದು ಈ ಹಿಂದೆ ಕೆಲವರು ಪ್ರಸ್ತಾಪಿಸಿದ್ದ ಹಿನ್ನೆಲೆಯಲ್ಲಿ ರಾಜ್ಯದ ಜನರು ರಾಜಕೀಯ ಬೆಳವಣಿಗೆಯನ್ನು ಒಂದು ಕುತೂಹಲದಿಂದಲೇ ಗಮನಿಸುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿರುವ ಮಾತುಗಳು ಜನರ ಕೌತುಕವನ್ನು ಹೆಚ್ಚಿಸುವ ರೀತಿಯಲ್ಲಿ ಹೊರಹೊಮ್ಮಿವೆ.

ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಹೇಳಿಕೆಯೇ ಇಂಥದ್ದೊಂದು ಕೌತುಕ ಮೂಡಲು ಕಾರಣವಾಗಿದೆ.

ಇದು ಸಂತರ ನಾಡು, ಇಲ್ಲಿ ವೈಚಾರಿಕ ಕ್ರಾಂತಿಯನ್ನು ಮಾಡಿದ ಗುರುಗಳಿದ್ದಾರೆ. ಕನಕದಾಸರು, ಸಂತ ಶಿಶುನಾಳ‌ ಶರೀಫರು ಇದ್ದ ತಾಲೂಕಿದು ಎಂದು ಹೇಳಿದ ಸಿಎಂ, ಬಳಿಕ ಯಾವುದೂ ಶಾಶ್ವತವಲ್ಲ, ಈ ಬದುಕೇ ಶಾಶ್ವತವಲ್ಲ ಎಂಬುದಾಗಿ ವೈರಾಗ್ಯ ಥರದ ಮಾತುಗಳನ್ನೂ ಆಡಿದ್ದಾರೆ.

ನಾವು ಎಷ್ಟು ದಿನ ಇರುತ್ತೇವೆ ಎನ್ನುವುದು ಗೊತ್ತಿಲ್ಲ. ಸ್ಥಾನಮಾನಗಳು ಶಾಶ್ವತವಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ‌‌ ನಿಂತಿದ್ದೇನೆ. ಕ್ಷೇತ್ರದ ಹೊರಗಡೆ ಇದ್ದಾಗ ನಾನು ಸಿಎಂ, ಗೃಹ ಸಚಿವ. ಆದರೆ ಕ್ಷೇತ್ರದ ಒಳಗಡೆ ಬಂದಾಗ ನಾನು ಬಸವರಾಜ ಬೊಮ್ಮಾಯಿ ಆಗಿ ಉಳಿಯುತ್ತೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತ, ಅದರ ಹಿಂದಿರುವ ಪದನಾಮಗಳು ಶಾಶ್ವತವಲ್ಲ ಎಂಬುದಾಗಿ ಸಿಎಂ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net