

ಚಿಕ್ಕೋಡಿ: ಲೈಸೆನ್ಸ್ ಕೇಳುವ ಬದಲು ಪೊಲೀಸರು ಕಾರಿನ ಗಾಜು ಒಡೆದರು ಎಂದು ಆರೋಪಿಸಿರುವ ಮಹಿಳೆಯೊಬ್ಬಳು ನಡು ರಸ್ತೆಯಲ್ಲೇ ಕಾರು ನಿಲ್ಲಿಸಿ ಅದರ ಮೇಲೇರಿ ಕುಳಿತ ಘಟನೆ ಗುರುವಾರ ಸಂಜೆ ಸಂಕೇಶ್ವರ ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಘಟಪ್ರಭಾ ಪೊಲೀಸರ ವಿರುದ್ಧ ಚಿಕ್ಕೋಡಿ ಮೂಲದ ಮಹಿಳೆ ಆರೋಪ ಮಾಡಿದ್ದಾರೆ. ಪೊಲೀಸರು ಕೈ ತೋರಿ ನಿಲ್ಲಿಸಿ ಎಂದು ಹೇಳಿದರೂ ಸಹ ಚಾಲಕ ಕಾರು ನಿಲ್ಲಿಸದಿದ್ದಾಗ ಪೊಲೀಸರು ಲಾಠಿ ಬೀಸಿದ್ದಾರೆನ್ನಲಾಗಿದೆ.
ಇದಾದ ಬಳಿಕ ಕಾರು ನಿಲ್ಲಿಸಿ, ನೀವು ಏನು ಬೇಕಾದರೂ ಕೇಳಿ ಮತ್ತು ಕೇಸ್ ಹಾಕಿ, ಆದರೆ ವಾಹನ ನಿಲ್ಲಿಸುವುದಕ್ಕೂ ಮೊದಲು ಕಾರಿನ ಗಾಜು ಏಕೆ ಒಡೆದ್ರಿ ಎಂದು ಪೊಲೀಸರಿಗೆ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಸಿಪಿಐ ಶ್ರೀಶೈಲ್ ಬ್ಯಾಕೂಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರು ಚಾಲಕ ಕುಡಿದು ಕಾರು ಚಲಾಯಿಸುತ್ತಿದ್ದ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು, ಬಳಿಕ ಡ್ರಿಂಕ್ ಆಂಡ್ ಡ್ರೈವ್ ಕೇಸ್ ಹಾಕಿ ಕಳುಹಿಸಿದ್ದಾರೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)