ನಾನು ಬರೀ ಗ್ಲಾಮರ್ ಗೊಂಬೆಯಲ್ಲ; ಆ ಅದಿತಿಯೇ ಬೇರೆ, ಈ ಅದಿತಿಯೇ ಬೇರೆ..

Published on

‘ರಿಸ್ಕ್ ತೆಗೆದುಕೊಂಡರೇ ಮಾತ್ರ ನಮ್ಮೊಳಗಿನ ಅಸಲಿಯತ್ತು ಹೊರಬರುತ್ತದೆ. ಆ ರಿಸ್ಕ್ ‘ಆನ’ ಚಿತ್ರದಲ್ಲಿ ನಾನು ತೆಗೆದುಕೊಂಡಿದ್ದೇನೆ...’ ‘ಆನ’ ಅನ್ನೋ ನಾಯಕಿ ಪ್ರಧಾನ ಸಿನಿಮಾದಲ್ಲಿ ನಟಿಸಿರುವ ಅದಿತಿ ಪ್ರಭುದೇವ ಮಾತಿದು. ಇಲ್ಲಿಯವರೆಗೂ ಕಂಡ ಅದಿತಿಯೇ ಬೇರೆ ಇನ್ನು ಮುಂದಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಅದಿತಿನೇ ಬೇರೆ ಎಂಬ ಮಾತು ಅವರ ಬಾಯಿಂದ ಬರುತ್ತದೆ. ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ಮತ್ತದೇ ಮರ ಸುತ್ತುವ ಪಾತ್ರಗಳ ಬದಲಾಗಿ ಹೊಸತನವನ್ನು ಪ್ರಯತ್ನಿಸಿದ್ದಾರಂತೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ‘ಪ್ರತಿ ಸಿನಿಮಾಗಳಲ್ಲಿ ಅಂದಚೆಂದದ ಹುಡುಗಿಯಾಗಿ ಕಾಣಿಸಿಕೊಳ್ಳುವುದು ನನಗಿಷ್ಟವಿಲ್ಲ. ಅದಿತಿ ಅಂದರೆ ಗ್ಲಾಮರ್ ಗೊಂಬೆಯಷ್ಟೇ ಅನಿಸಬಾರದು. ಹಾಗಾಗಿಯೇ ‘ಆನ’ ಚಿತ್ರದಲ್ಲಿ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದೇನೆ. ಸೇಫ್ ಝೋನ್​ನಲ್ಲಿಯೇ ಆಟ ಆಡುವುದು ಬೇಡ ಎಂದೇ ಬೇರೆ ಶೈಲಿಯನ್ನು ಅಳವಡಿಸಿಕೊಂಡಿದ್ದೇನೆ. ಸದ್ಯ ನಾನು ಒಪ್ಪಿಕೊಂಡಿರುವ ಬಹುತೇಕ ಎಲ್ಲ ಸಿನಿಮಾಗಳು ಅದೇ ತರಹ ಇವೆ’ ಎನ್ನುತ್ತಾರೆ ಅದಿತಿ.

ಮನೋಜ್ ಪಿ. ನಡುಲಮನೆ ನಿರ್ದೇಶನದಲ್ಲಿ ಮೂಡಿಬಂದಿರುವ ‘ಆನ’ ಚಿತ್ರ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಪರಿಕಲ್ಪನೆಯ ಚಿತ್ರ ಎಂದು ಸ್ವತಃ ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ ಇದೀಗ ಹೊರ ಬಂದಿರುವ ಟೀಸರ್ ಆ ಮಾತಿಗೆ ಒಪು್ಪವಂತಿದೆ. ತಾಂತ್ರಿಕವಾಗಿಯೂ ಚಿತ್ರ ಹೊಸದಾಗಿದ್ದು, ಏಪ್ರಿಲ್ ಕೊನೆಯ ಅಥವಾ ಮೇನಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡದ್ದು. ಅದಿತಿ ಜತೆಗೆ ಸಮರ್ಥ, ವಿಕಾಸ್, ಕಾರ್ತಿಕ್ ಮತ್ತು ವರುಣ್ ಪ್ರಮುಖ ಪಾತ್ರದಲ್ಲಿದ್ದಾರೆ. ‘ಚೂರಿಕಟ್ಟೆ’ ಸಿನಿಮಾ ಮಾಡಿದ್ದ ಪ್ರೇರಣಾ, ‘ಆನ’ದಲ್ಲಿಯೂ ನಟಿಸಿದ್ದಾರೆ. ಉದಯ್ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸಿರುವ ಈ ಚಿತ್ರವನ್ನು ಪೂಜಾ ವಸಂತ್​ಕುಮಾರ್ ನಿರ್ವಿುಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net