ನಾಲ್ವರನ್ನು ಮದ್ವೆ ಆಗಿದ್ದಾನೆ, ಹಲವರ ಜತೆ ಅಕ್ರಮ ಸಂಬಂಧವಿದೆ, ನನ್ನನ್ನು ಕಾಪಾಡಿ... ಬೆಂಗ್ಳೂರಲ್ಲಿ ಪೇದೆ ಪತ್ನಿ ಕಣ್ಣೀರು

New Project(15)
Published on

ಬೆಂಗಳೂರು: ನಗರ ವಿಶೇಷ ಘಟಕದ ಹೆಡ್​ಕಾನ್​ಸ್ಟೇಬಲ್​ ಪಿ.ಎಂ. ಬಾಬು ವಿರುದ್ಧ ಈತನ ಪತ್ನಿಯೇ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ತಾನು ಅನುಭವಿಸುತ್ತಿರುವ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

11 ವರ್ಷದ ಹಿಂದೆ ನನಗೆ ಬಾಬು ಪರಿಚಯ ಆಯ್ತು, ಮದ್ವೆ ಆಗುವುದಾಗಿ ನಂಬಿಸಿದ. ಎಲ್ಲವೂ ಮುಗಿದ ಮೇಲೆ ವರಸೆ ಬದಲಿಸಿದ. ಅಂದಿನಿಂದ ಇಂದಿನ ವರೆಗೂ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ಕೊಡುತ್ತಿದ್ದಾನೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ಅವರಿಗೂ ಬಾಯಿಗೆ ಬಂದಂತೆ ಬೈಯ್ಯುತ್ತಾನೆ. ಹಿಂಸಿಸುತ್ತಾನೆ. ತಿಂಗಳ ಮುಟ್ಟಿನ ವೇಳೆಯೂ ದೈಹಿಕವಾಗಿ ಹಿಂಸಿಸಿದ್ದಾನೆ. ಇವನಿಗೆ ನಾನೊಬ್ಬಳೇ ಪತ್ನಿಯಲ್ಲ, ನಾಲ್ವರನ್ನು ಮದ್ವೆ ಆಗಿ ವಂಚಿಸಿದ್ದಾನೆ. ಹಲವರ ಜೊತೆ ಅಕ್ರಮ ಸಂಬಂಧವೂ ಇದೆ... ಎಂದು ಹೆಡ್​ಕಾನ್​ಸ್ಟೇಬಲ್​ ವಿರುದ್ಧ ಗಿರಿನಗರ ಪೊಲೀಸ್​ ಠಾಣೆಯಲ್ಲಿ ಪತ್ನಿಯೇ ದೂರು ನೀಡಿದ್ದಾಳೆ.

ಹಲವು ಬಾರಿ ಠಾಣೆಗೆ ಕರೆಸಿ ಬುದ್ಧಿವಾದ ಹೇಳಿದರೂ ಪ್ರಯೋಜನವಾಗಿಲ್ಲ. ಕುಡಿದು ಬಂದು ಮಕ್ಕಳ ಮುಂದೆಯೇ ಹಲ್ಲೆ ಮಾಡುತ್ತಾನೆ. ನನ್ನ ಎಡಗೈ ಸ್ವಾದೀನ ಕಳೆದುಕೊಂಡಿದೆ. ಹೇಗೂ ನಮ್ಮ ಪಾಡಿಗೆ ನಾವು ಬದುಕೋಣ ಅಂದ್ರೂ ಆತ ಬಿಡ್ತಿಲ್ಲ. ಇವನು ಪೊಲೀಸ್​ ಇಲಾಖೆಯ ಸಂಬಳವನ್ನೇ ನಂಬಿ ಕೂತಿಲ್ಲ. ರಿಯಲ್​ಎಸ್ಟೇಟ್​ ವ್ಯವಹಾರವನ್ನೂ ಮಾಡುತ್ತಿದ್ದಾನೆ. ಆತನಿಂದ ನನ್ನ ಮಕ್ಕಳಿಗೆ ಮತ್ತು ನನಗೆ ಜೀವ ಬೆದರಿಕೆ ಇದೆ, ದಯವಿಟ್ಟು ಆತನಿಂದ ನಮ್ಮನ್ನು ರಕ್ಷಿಸಿ ಎಂದು ನೊಂದ ಮಹಿಳೆ ಕಣ್ಣೀರು ಹಾಕಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net