ಹೊಸದುರ್ಗ:ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಸರ್ಕಾರ ಅಥವಾ ಮಠಗಳು ಮಾತ್ರವಲ್ಲದೆ ಸ್ಥಳೀಯ ಯುವಶಕ್ತಿಯೂ ಕೈಜೋಡಿಸಬೇಕಿದೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ವೀಕ್ಷಿಸಿ ಮಾತನಾಡಿದರು.
ಸಾಣೇಹಳ್ಳಿಯ ಯುವಕರು ಸ್ವಯಂಪ್ರೇರಿತರಾಗಿ ಬಾವಿ ಮತ್ತು ಕೆರೆಯ ಅಭಿವೃದ್ಧಿಗೆ ಶ್ರಮದಾನ ಮಾಡಬೇಕು. ಕೆರೆ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ. ಒಂದು ವಾರದ ಅವಧಿಯಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದರು.
ಕೆರೆ ಸ್ವಚ್ಛವಾಗುತ್ತಿರುವುದು ಸಂತಸ ತಂದಿದೆ. ಮಳೆರಾಯ ಕೃಪೆ ತೋರಿ ಆದಷ್ಟು ಬೇಗ ಕೆರೆ ತುಂಬುವಂತಾಗಲಿ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಸಿ ಈ ಭಾಗದ ರೈತರ ಬದುಕು ಹಸನಾಗಲಿ ಎಂದು ಆಶಿಸಿದರು.
ಕೆರೆ ಮಧ್ಯ ಭಾಗದಲ್ಲಿರುವ ಐತಿಹಾಸಿಕ ದೇವ ಕನ್ನಿಕೆಯರ ಬಾವಿ ಸದ್ಯ ಶಿಥಿಲಾವಸ್ಥೆಯಲ್ಲಿದೆ. ಅಧಿಕಾರಿಗಳು ಪುರಾತನ ಭಾವಿಯ ನವೀಕರಣ ಮತ್ತು ಸಂರಕ್ಷಣೆಗೆ ತಕ್ಷಣ ಯೋಜನೆ ರೂಪಿಸಬೇಕು. ದೇವ ಕನ್ನಿಕೆಯರ ಬಾವಿ ಪುನಶ್ಚೇತನ ಕಾಮಗಾರಿಗೆ ಆರ್ಥಿಕ ನೆರವನ್ನು ಸಾಣೇಹಳ್ಳಿ ಮಠದಿಂದಲೇ ಭರಿಸಲಾಗುವುದು ಎಂದರು.