ನಾವು ವೋಟ್ ಮಾಡಲ್ಲ!

ಹಿರಿಯೂರಿನ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಕಲ್ವಳ್ಳಿ ಭಾಗದ 16 ಕೆರೆಗಳಿಗೆ ವಿವಿಎಸ್ ಜಲಾಶಯದಿಂದ ನೀರು ತುಂಬಿಸುವಂತೆ ಒತ್ತಾಯಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಕೆ.ಟಿ.ತಿಪ್ಪೇಸ್ವಾಮಿ, ಚಂದ್ರಗಿರಿ, ವೆಂಕಟೇಶ್, ಆಲೂರು ಸಿದ್ದರಾಮಣ್ಣ ಇದ್ದರು.
ಹಿರಿಯೂರಿನ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಕಲ್ವಳ್ಳಿ ಭಾಗದ 16 ಕೆರೆಗಳಿಗೆ ವಿವಿಎಸ್ ಜಲಾಶಯದಿಂದ ನೀರು ತುಂಬಿಸುವಂತೆ ಒತ್ತಾಯಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಕೆ.ಟಿ.ತಿಪ್ಪೇಸ್ವಾಮಿ, ಚಂದ್ರಗಿರಿ, ವೆಂಕಟೇಶ್, ಆಲೂರು ಸಿದ್ದರಾಮಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯೂರಲ್ಲಿ ಪ್ರತಿಭಟನಾನಿರತ ರೈತರ ಎಚ್ಚರಿಕೆ
  • ನೀರಿಗಾಗಿ ಮಾಡು ಇಲ್ಲವೇ ಮಡಿ ಹೋರಾಟ
  • ಕಲ್ವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸಲು ಆಗ್ರಹ
ಹಿರಿಯೂರು: ತಾಲೂಕಿನ ಕಲ್ವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ರೈತರ ಹೋರಾಟ ಮಾಡು ಇಲ್ಲವೇ ಮಡಿ ಹಂತಕ್ಕೆ ತಲುಪಿದ್ದು, ನೀರಿಲ್ಲದೆ ನಾವು ಸತ್ತಿದ್ದೇವೆ. ಸತ್ತವರಿಗೆ ಏಕೆ ವೋಟ್ ಕೇಳಲು ಬರುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ವಳ್ಳಿ ಭಾಗದ ಗಾಯತ್ರಿ ಅಣೆಕಟ್ಟೆ ಒಳಗೊಂಡು 16 ಕೆರೆಗಳಿಗೆ ವಿವಿಎಸ್ ಜಲಾಶಯದಿಂದ ನೀರು ಹರಿಸುವಂತೆ ಆಗ್ರಹಿಸಿ ಹೋರಾಟ ತೀವ್ರಗೊಂಡಿದ್ದು, ಗೌಡನಹಳ್ಳಿಯಿಂದ ಸೋಮವಾರ ಸಾವಿರಾರು ರೈತರು ರ‌್ಯಾಲಿಯಲ್ಲಿ ಬಂದು ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಲ್ವಳ್ಳಿ ಭಾಗದ 166 ಹಳ್ಳಿಗಳಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿಗೂ ಹಾಹಾಕಾರವಿದೆ. ಈ ಭಾಗದ 16 ಕೆರೆಗಳು ತುಂಬಿದ್ದೇ ಅಪರೂಪ. ಸಾವಿರ ಅಡಿ ಕೊರೆಸಿದರೂ ಕೊಳವೆ ಬಾವಿಗಳಲ್ಲಿ ಹನಿ ನೀರು ಬರುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿದ್ದ ಅಡಿಕೆ, ತೆಂಗು, ದಾಳಿಂಬೆ ತೋಟಗಳು ಒಣಗಿ ಹೋಗಿವೆ. ಪದವಿ ನಂತರ ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂಬ ಹುಮ್ಮಸ್ಸಿನಲ್ಲಿ ಕೃಷಿಗೆ ಇಳಿದಿದ್ದ ನೂರಾರು ಯುವಕರು ಬೆಂಗಳೂರು, ಗೋವಾ, ಮುಂಬೈ ನಗರಗಳಿಗೆ ವಲಸೆ ಹೋಗಿದ್ದಾರೆ. ಇದು ಆಡಳಿತ ನಡೆಸುವವರಿಗೆ ತಿಳಿದಿದ್ದೂ ನೀರು ಹರಿಸುವ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದು ಅನ್ನದಾತರಿಗೆ ಮಾಡುತ್ತಿರುವ ದ್ರೋಹ ಎಂದು ಕಿಡಿಕಾರಿದರು.
ಕಲ್ವಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸಲು ಅಗತ್ಯವಿರುವ 0.307 ಟಿಎಂಸಿ ಅಡಿ ನೀರನ್ನು ವಿವಿ ಸಾಗರ ಜಲಾಶಯದಿಂದ ವಿಶ್ವೇಶ್ವರಯ್ಯ ನೀರಾವರಿ ನಿಗಮ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. 265 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲು ವಿಸ್ತೃತ ವರದಿ ತಯಾರಿಸಿ ತಾಂತ್ರಿಕ ಅನುಮೋದನೆ ನೀಡಲಾಗಿದೆ. ಈ ವಿಚಾರವನ್ನು ಸಚಿವ ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆಯಲು ಎಷ್ಟುದಿನ ಬೇಕು. ಬರದ ಬೇಗೆಯಿಂದ ಕಂಗೆಟ್ಟಿರುವ ರೈತರ ತಾಳ್ಮೆಗೂ ಒಂದು ಮಿತಿ ಇದೆಯಲ್ಲವೇ? ಎಂದು ಮುಖಂಡರು ಪ್ರಶ್ನಿಸಿದರು.
ಈ ಭಾಗದ ಜನ ಬದುಕಬೇಕೆಂದರೆ ವಾಣಿ ವಿಲಾಸ ಅಣೆಕಟ್ಟೆಯಿಂದ ನೀರು ಬರಲೇಬೇಕು. ಇಲ್ಲವಾದಲ್ಲಿ ನಾವು ಬದುಕಿದ್ದೂ ಸತ್ತಂತೆ. ಸತ್ತವರನ್ನು ವೋಟ್ ಕೇಳಲು ಯಾರೂ ಬರಬಾರದು. ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ಕೊಟ್ಟು ನಮ್ಮ ಊರುಗಳ ಒಳಗೆ ಬರಬೇಕು. ಸುಳ್ಳು ಭರವಸೆಗಾರರು ಗ್ರಾಮದೊಳಗೆ ಕಾಲಿಡಬಾರದು ಎಂದು ರೈತರು ಷರತ್ತು ಹಾಕಿದರು.
ಚುನಾವಣೆ ಬಹಿಷ್ಕಾರದ ಎಚ್ಚರಿಕೆ: ತಹಸೀಲ್ದಾರ್ ಎಂ. ಸಿದ್ದೇಶ್ ಅವರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಕಲ್ವಳ್ಳಿ ಭಾಗದ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಆರಂಭಿಸದಿದ್ದರೆ ವಿಧಾನಸಭಾ ಉಪ ಚುನಾವಣೆ ಬಹಿಷ್ಕರಿಸಬೇಕಾಗುತ್ತದೆ. ಜೆ.ಜಿ. ಹಳ್ಳಿ ಮಾತ್ರವಲ್ಲದೆ ಕಸಬಾ, ಐಮಂಗಲ ಹಾಗೂ ಧರ್ಮಪುರ ಹೋಬಳಿಯಲ್ಲಿ ನೀರು ತುಂಬಿಸುವ ಯೋಜನೆಯಿಂದ ಕೈಬಿಟ್ಟಿರುವ ಕೆರೆಗಳಿಗೂ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಪತ್ರಕರ್ತ ಲಕ್ಷ್ಮಣ್ ಹೂಗಾರ್, ದಿಂಡಾವರ ಚಂದ್ರಗಿರಿ, ಬಳಗಟ್ಟ ವೆಂಕಟೇಶ್, ಆಲೂರು ಸಿದ್ದರಾಮಣ್ಣ, ಗೌಡನಹಳ್ಳಿ ಅಭಿ, ಶ್ರೀಪತಿ, ನಾಗರಾಜ್, ಪ್ರಕಾಶ್, ಸೂರಪ್ಪನ ಹಟ್ಟಿ ಕೃಷ್ಣ, ದಿಂಡಾವರ ವಿರೂಪಾಕ್ಷ, ಗಿರೀಶ್ ಗೌಡ, ಮಹಂತೇಶ್ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net