ರಾಣೀಕೆರೆಯಿಂದ ಚೆಕ್ ಡ್ಯಾಂಗಳಿಗೆ ನೀರು

ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ರಾಣೀಕೆರೆಯಿಂದ ಗುರುವಾರ ಸಮೀಪದ ಚೆಕ್ ಡ್ಯಾಂಗಳಿಗೆ ಒಂದು ಅಡಿ ನೀರು ಹರಿಸಲು ಶಾಸಕ ಟಿ. ರಘುಮೂರ್ತಿ ಚಾಲನೆ ನೀಡಿದರು. ಉಪ ವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್, ತಹಸೀಲ್ದಾರ್ ರೇಹಾನ್ ಪಾಷ, ವಿ.ಆರ್. ಸಿದ್ದೇಶ್ವರಪ್ಪ, ಡಿ. ರಾಜಣ್ಣ ಇತರರಿದ್ದರು.
ಚಳ್ಳಕೆರೆ ತಾಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ರಾಣೀಕೆರೆಯಿಂದ ಗುರುವಾರ ಸಮೀಪದ ಚೆಕ್ ಡ್ಯಾಂಗಳಿಗೆ ಒಂದು ಅಡಿ ನೀರು ಹರಿಸಲು ಶಾಸಕ ಟಿ. ರಘುಮೂರ್ತಿ ಚಾಲನೆ ನೀಡಿದರು. ಉಪ ವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್, ತಹಸೀಲ್ದಾರ್ ರೇಹಾನ್ ಪಾಷ, ವಿ.ಆರ್. ಸಿದ್ದೇಶ್ವರಪ್ಪ, ಡಿ. ರಾಜಣ್ಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ. ರಘುಮೂರ್ತಿ ಚಾಲನೆ
  • ಜಿಲ್ಲಾಡಳಿತದ ಆದೇಶದಂತೆ ಕ್ರಮ
  • ಅಧಿಕಾರಿಗಳು ನಿಗಾ ವಹಿಸಲು ಸೂಚನೆ
ಚಳ್ಳಕೆರೆ: ರಾಣೀಕೆರೆಯಿಂದ ಒಂದು ಅಡಿ ನೀರನ್ನು ಗರಣಿ ಹಳ್ಳದ ಚೆಕ್ ಡ್ಯಾಂಗಳಿಗೆ ಹರಿಸುವ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದು ಶಾಸಕ ಟಿ. ರಘುಮೂರ್ತಿ ಸೂಚಿಸಿದರು.
ತಾಲೂಕಿನ ಮೀರಾಸಾಬಿಹಳ್ಳಿಯ ರಾಣೀಕೆರೆಯಿಂದ ಗರಣಿ ಹಳ್ಳಕ್ಕೆ ನಿರ್ಮಿಸಿರುವ ಚೆಕ್ ಡ್ಯಾಂಗಳಿಗೆ ಗುರುವಾರ ಒಂದು ಅಡಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
2001ರಲ್ಲಿ ಆಗಿನ ಸರ್ಕಾರ ಕುಡಿಯುವ ನೀರು ಹಾಗೂ ಅಂತರ್ಜಲ ವೃದ್ಧಿ ಉದ್ದೇಶದಿಂದ ಕೆರೆಯ ನೀರು ಹೊರಗೆ ಹರಿಸದಂತೆ ಕ್ರಮ ವಹಿಸಿತ್ತು. ಹೀಗಾಗಿ 25ವರ್ಷಗಳಿಂದ ನೀರು ಹರಿಸಿರಲಿಲ್ಲ. ಕೆರೆಯ ಅಚ್ಚುಕಟ್ಟು ಪ್ರದೇಶದ ಐದಾರು ಗ್ರಾಮಗಳ ಬೇಡಿಕೆಯಂತೆ ಜಾನುವಾರು ಮತ್ತು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಈಗ ಕೆರೆ ನೀರನ್ನು ಹೊರಗೆ ಬಿಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಡಳಿತದ ಆದೇಶದಂತೆ ಒಂದು ಅಡಿ ನೀರು ಹರಿಯಲು ಬೇಕಾಗುವ 12ರಿಂದ 15 ದಿನಗಳ ಕಾಲ ನಿಗಾ ವಹಿಸಬೇಕು. ಪ್ರತಿ ಕ್ಷಣವೂ ನೀರಿನ ಗೇಟು ಮತ್ತು ವಾಲ್ವ್ ನೋಡಿಕೊಳ್ಳಬೇಕಾಗಿದೆ ಎಂದು ಸ್ಥಳದಲ್ಲಿದ್ದ ಸಣ್ಣ ನೀರಾವರಿ ಎಇಇ ಭೀಮರಾಜ್, ಇಇ ಕೆ.ಎಂ. ಕೃಷ್ಣ, ರವಿಕುಮಾರ್ ಅವರಿಗೆ ಸೂಚಿಸಿದರು.
ಕೆರೆಯಿಂದ ಒಂದು ಅಡಿ ನೀರು ಹರಿಸುವ ಕುರಿತಂತೆ ಕೆರೆಯ ಹಿನ್ನೀರಿನ ಗ್ರಾಮಗಳಾದ ಬೊಮ್ಮಸಮುದ್ರ, ಭರಮಸಾಗರ, ದೊಡ್ಡೇರಿ ಮತ್ತು ಅಚ್ಚುಕಟ್ಟು ಪ್ರದೇಶದ ಗ್ರಾಮಗಳಾದ ಮೀರಾಸಾಬಿಹಳ್ಳಿ, ವಿಡುಪನಕುಂಟೆ, ಕರೀಕೆರೆ, ರಂಗವ್ವನಹಳ್ಳಿ ಮತ್ತು ವಿಶ್ವೇಶ್ವರಪುರ ಗ್ರಾಮಸ್ಥರ ನಡುವೆ ವಿವಾದ ಏರ್ಪಟ್ಟಿತ್ತು. ಈ ಸಂಬಂಧ ಎರಡೂ ಕಡೆಯವರನ್ನು ಸೇರಿಸಿ ಸಂಧಾನ ಮಾಡಿ ನೀರು ಹರಿಸಲಾಗಿದೆ ಎಂದು ಹೇಳಿದರು.
ಕೆರೆಯಿಂದ ಚೆಕ್ ಡ್ಯಾಂಗಳಿಗೆ ನೀರು ಹರಿಸುವ ವೇಳೆ ಐದಾರು ಗ್ರಾಮಸ್ಥರು ಹಾಜರಿದ್ದರು. ಮಹಿಳೆಯರು ಗಂಗಾಪೂಜೆ ನೆರವೇರಿಸಿದರು. ನೀರು ಹರಿಸಲು ಕಾರಣಿಭೂತರಾದ ಶಾಸಕ ರಘುಮೂರ್ತಿ ಅವರನ್ನು ಸನ್ಮಾನಿಸಿದರು.
ರಾಣೀಕೆರೆ ಪೂರಕ ನಾಲೆ ಹೋರಾಟಗಾರರ ಒಕ್ಕೂಟದ ವಿ.ಆರ್. ಸಿದ್ದೇಶ್ವರಪ್ಪ, ಡಿ. ರಾಜಪ್ಪ, ತಿಪ್ಪೇಸ್ವಾಮಿ ರೆಡ್ಡಿ, ರಂಗಮ್ಮ, ಭಾಗ್ಯಮ್ಮ, ಅನುಸೂಯಮ್ಮ, ಗೋವಿಂದಪ್ಪ, ಸುದರ್ಶನ ರೆಡ್ಡಿ, ತಬಲ ರಂಗಸ್ವಾಮಿ, ಲೋಕಣ್ಣ, ಎ. ನಾಗರಾಜ್, ಆರ್.ಬಿ. ಹೊನ್ನೂರ ಸ್ವಾಮಿ, ಈ. ವೀರೇಶ್, ಆರ್. ಹರ್ಷಾ, ಕೆ. ವೀರಭದ್ರಯ್ಯ, ಜಿ.ಟಿ. ಶಶಿಧರ್, ರುದ್ರಪ್ಪ, ಮಂಜುನಾಥ್ ರೆಡ್ಡಿ, ಸೀತಾರಾಮಪ್ಪ ಇತರರು ಇದ್ದರು. ಕೆರೆಯಿಂದ ನೀರು ಹರಿಸಲು ವಿರೋಧ ಮಾಡಿದ್ದ ಹಿನ್ನೀರಿನ ಭಾಗದ ಭರಮಸಾಗರ, ಬೊಮ್ಮಸಮುದ್ರ ಮತ್ತು ದೊಡ್ಡೇರಿ ಗ್ರಾಮಸ್ಥರ ಉಪಸ್ಥಿತಿ ಕಂಡುಬರಲಿಲ್ಲ.
ಕೆರೆಗೆ ಭದ್ರಾ ನೀರು: ಜಿಲ್ಲೆಯ ಬಹು ವರ್ಷಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಕಾಮಗಾರಿ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಗೊನೂರು ಮಾರ್ಗವಾಗಿ ದ್ಯಾಮನಹಳ್ಳಿ, ಕಲ್ಲಹಳ್ಳಿ, ಹಿರೇಮದುರೆ, ಗೋಪನಹಳ್ಳಿ ಗರಣಿ ಹಳ್ಳದ ಮೂಲಕ ರಾಣೀಕೆರೆಗೆ ನೀರು ಹರಿಯಲಿದೆ. ಇದರಿಂದ ಕೃಷಿಗೆ ನಿರಂತರ ನೀರು ದೊರೆಯಲಿದೆ. ಹಿರಿಯೂರಿನ ವಿವಿ ಸಾಗರಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಡಿ ಎರಡು ಟಿಎಂಸಿ ನೀರು ಹೆಚ್ಚಿಸಿರುವ ಕಾರಣ ತಾಲೂಕಿನ ವೇದಾವತಿ ನದಿ ಪಾತ್ರಕ್ಕೆ 0.25 ಟಿಎಂಸಿ ನೀರು ಹರಿಸಲು 2021ರಲ್ಲಿ ಆಗಿನ ಬಿಜೆಪಿ ಸರ್ಕಾರದಲ್ಲಿ ಆದೇಶ ಪಡೆಯಲಾಗಿದೆ. ಇದರಿಂದ ವೇದಾವತಿ ನದಿ ಭಾಗದಲ್ಲಿ 20 ಸಾವಿರ ಎಕರೆ ಕೃಷಿ ಭೂಮಿ ಸಮೃದ್ಧವಾಗಿದೆ. ಸುಮಾರು 14 ಸಾವಿರ ಎಕರೆ ಅಡಿಕೆ ಬೆಳೆ ವಿಸ್ತರಣೆಯಾಗಿದೆ ಎಂದು ಶಾಸಕರು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net