ಸಿರಿಧಾನ್ಯಗಳ ಬಿತ್ತನೆಗೆ ಆದ್ಯತೆ ಕೊಡಿ

ಹಿರಿಯೂರಿನ ಕೃಷಿ ಇಲಾಖೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಜೆ. ಅಶೋಕ್, ಕೆ.ಟಿ. ತಿಪ್ಪೇಸ್ವಾಮಿ, ಹೊರಕೇರಪ್ಪ, ಚೇತನ್ ಇತರರಿದ್ದರು.
ಹಿರಿಯೂರಿನ ಕೃಷಿ ಇಲಾಖೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಜೆ. ಅಶೋಕ್, ಕೆ.ಟಿ. ತಿಪ್ಪೇಸ್ವಾಮಿ, ಹೊರಕೇರಪ್ಪ, ಚೇತನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಹಾಯಕ ಕೃಷಿ ನಿರ್ದೇಶಕ ಜೆ. ಅಶೋಕ್ ಸಲಹೆ
  • ಹಿರಿಯೂರಿನಲ್ಲಿ ರೈತರ ಕುಂದುಕೊರತೆ ಸಭೆ
  • ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ
ಹಿರಿಯೂರು: ಮುಂಗಾರು ಮಳೆ ಕೊರತೆಯಿಂದ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಕುಂಠಿತವಾಗಿದ್ದು, ರೈತರು ಸಿರಿಧಾನ್ಯಗಳಿಗೆ ಆದ್ಯತೆ ನೀಡುವುದು ಸೂಕ್ತ ಎಂದು ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ತಿಳಿಸಿದರು.
ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಇಲ್ಲಿಯವೆಗೆ ಶೇ.9ರಷ್ಟು ಮಾತ್ರ ಬಿತ್ತನೆಯಾಗಿದೆ. ಜು.31ರ ವರೆಗೆ ಶೇಂಗಾ ಬಿತ್ತನೆಗೆ ಅವಕಾಶವಿದೆ. ಆಗಸ್ಟ್‌ನಲ್ಲಿ ವರುಣ ಕೃಪೆ ತೋರಿದರೆ ರೈತರು ಸಿರಿಧಾನ್ಯ ಬೆಳೆಗಳಾದ ರಾಗಿ, ಸಜ್ಜೆ, ನವಣೆ, ಸಾಮೆ, ಬರಗು, ಜೋಳ ಬಿತ್ತನೆ ಮಾಡುವುದು ಸೂಕ್ತ ಎಂದರು.
ಸಿರಿಧಾನ್ಯ ಬೆಳೆಗಳು ಕಡಿಮೆ ನೀರಿನಲ್ಲೂ ಸಮೃದ್ಧವಾಗಿ ಬೆಳೆಯುತ್ತವೆ. ಇದರಿಂದ ರೈತರು ಆರ್ಥಿಕ ಲಾಭ ಗಳಿಸಬಹುದು. ರೈತರಿಗೆ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಿರಿಧಾನ್ಯಗಳ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಪ್ರಸಕ್ತ ವರ್ಷ ತಾಪಮಾನ ಏರಿಕೆ, ಮಳೆ ಕೊರತೆಯಿಂದ ತೋಟಗಾರಿಕೆ ಬೆಳೆಗಳ ಇಳುವರಿ ಕುಸಿಯುವ ಆತಂಕ ಎದುರಾಗಿದೆ. ರೈತರು ಅಡಿಕೆಗೆ ವಿಮೆ ಪಾವತಿಸಲು ಅವಕಾಶ ಇದೆ ಎಂದು ಮಾಹಿತಿ ನೀಡಿದರು.
ರೈತ ಮುಖಂಡ ಕೆ.ಸಿ.ಹೊರಕೇರಪ್ಪ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಮಳೆ ವಿಳಂಬದಿಂದ ಭೀಕರ ಬರ ಎದುರಾಗಿದೆ. ಬಿತ್ತನೆ ಕುಂಠಿತ, ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ-ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಅನ್ನದಾತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಕೃಷಿ, ತೋಟಗಾರಿಕೆ ಇಲಾಖೆಯಿಂದ ಗುಣಮಟ್ಟದ ಬಿತ್ತನೆ ಬೀಜ, ಕೃಷಿ ಪರಿಕರ ವಿತರಣೆ ಮಾಡಬೇಕು. ಬೆಳೆವಿಮೆ ಕುರಿತು ರೈತರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ ವಿಷಜಂತುಗಳು ಕಚ್ಚಿ ಮೃತಪಟ್ಟ ರೈತರಿಗೆ ನೀಡುವ ಪರಿಹಾರ ಮೊತ್ತವನ್ನು 2ರಿಂದ 5ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್, ಲಕ್ಷ್ಮಿಕಾಂತ್, ವೆಂಕಟೇಶ್, ಗಡಾರಿ ಕೃಷ್ಣಪ್ಪ, ಚೇತನ್, ಪುನೀತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net