ಮುಂಗಾರು ಎದುರಿಸಲು ಕೊಂಕಣ ರೈಲ್ವೆ ಸನ್ನದ್ಧ

 ಭಾರಿ ಮಳೆ ಹಾಗೂ ಕಠಿಣ ಭೂಪ್ರದೇಶದ ಸವಾಲುಗಳ ನಡುವೆಯೂ ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ರೈಲು ಸಂಚಾರವನ್ನು ಖಚಿತಪಡಿಸಿಕೊಳ್ಳಲು ಕೊಂಕಣ ರೈಲ್ವೆ ನಿಗಮ 2026ರ ಮುಂಗಾರು ಹಂಗಾಮಿಗೆ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಭಾರಿ ಮಳೆ ಹಾಗೂ ಕಠಿಣ ಭೂಪ್ರದೇಶದ ಸವಾಲುಗಳ ನಡುವೆಯೂ ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ರೈಲು ಸಂಚಾರವನ್ನು ಖಚಿತಪಡಿಸಿಕೊಳ್ಳಲು ಕೊಂಕಣ ರೈಲ್ವೆ ನಿಗಮ 2026ರ ಮುಂಗಾರು ಹಂಗಾಮಿಗೆ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ.
Published on
ಮಂಗಳೂರು: ಭಾರಿ ಮಳೆ ಹಾಗೂ ಕಠಿಣ ಭೂಪ್ರದೇಶದ ಸವಾಲುಗಳ ನಡುವೆಯೂ ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ರೈಲು ಸಂಚಾರವನ್ನು ಖಚಿತಪಡಿಸಿಕೊಳ್ಳಲು ಕೊಂಕಣ ರೈಲ್ವೆ ನಿಗಮ 2026ರ ಮುಂಗಾರು ಹಂಗಾಮಿಗೆ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸೋಮವಾರದಿಂದ ಮುಂದಿನ ಅಕ್ಟೋಬರ್ 20 ರವರೆಗೆ ಮುಂಗಾರು ವಿಶೇಷ ವೇಳಾಪಟ್ಟಿಜಾರಿಯಲ್ಲಿರಲಿದ್ದು, ಸುರಕ್ಷತೆಯ ದೃಷ್ಟಿಯಿಂದ ರೈಲುಗಳ ವೇಗವನ್ನು ನಿಯಂತ್ರಿಸಲಾಗುತ್ತದೆ.
ಕಳೆದ ಒಂದು ದಶಕದಿಂದ ಮುಂಗಾರು ಅವಧಿಯಲ್ಲಿ ಯಾವುದೇ ಪ್ರಮುಖ ಬಂಡೆ ಕುಸಿತದ ಘಟನೆಗಳು ಸಂಭವಿಸದಂತೆ ತಡೆದಿರುವ ಕೊಂಕಣ ರೈಲ್ವೆ, ಈ ಬಾರಿಯೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಮಣ್ಣು ಕುಸಿತ ಮತ್ತು ಬಂಡೆಗಳು ಹಳಿಗಳ ಮೇಲೆ ಬೀಳದಂತೆ ತಡೆಯಲು ಜಿಯೋ-ಸೇಫ್ಟಿ ಕಾಮಗಾರಿಗಳು, ಬಂಡೆಗಳಿಗೆ ಬೋಲ್ಟಿಂಗ್, ಶಾರ್ಟ್‌ಕ್ರಿಟಿಂಗ್ ಹಾಗೂ ಬೌಲ್ಡರ್ ನೆಟ್ಟಿಂಗ್‌ಗಳನ್ನು ಅಳವಡಿಸಲಾಗಿದೆ. ನೀರು ಸರಾಗವಾಗಿ ಹರಿದುಹೋಗಲು ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದ್ದು, ಅಗತ್ಯವಿರುವ ಕಡೆಗಳಲ್ಲಿ ಪಂಪ್‌ಗಳನ್ನು ನಿಯೋಜಿಸಲಾಗಿದೆ. ಹಳಿಗಳ ರಕ್ಷಣೆಗಾಗಿ 657 ತರಬೇತಿ ಪಡೆದ ಸಿಬ್ಬಂದಿಯನ್ನು 24 ಗಂಟೆಗಳ ಗಸ್ತಿಗೆ ನಿಯೋಜಿಸಲಾಗಿದೆ. ಕಾರವಾರ, ಭಟ್ಕಳ, ಉಡುಪಿ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ರೈಲ್ವೆ ನಿರ್ವಹಣಾ ವಾಹನಗಳು, ಅಗೆಯುವ ಯಂತ್ರಗಳು ಮತ್ತು ಅಪಘಾತ ಪರಿಹಾರ ರೈಲುಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.
*ತಂತ್ರಜ್ಞಾನದ ಬಳಕೆ
ಮಳೆ ಪ್ರಮಾಣ ಅಳೆಯಲು ಮಂಗಳೂರು ಮಾರ್ಗದ ಉಡುಪಿ, ಭಟ್ಕಳ, ಕಾರವಾರ, ಮಡಗಾಂವ್ ಸೇರಿದಂತೆ 9 ನಿಲ್ದಾಣಗಳಲ್ಲಿ ಸ್ವಯಂ-ದಾಖಲಾತಿ ಮಳೆ ಮಾಪಕಗಳನ್ನು ಅಳವಡಿಸಲಾಗಿದೆ. ಗಾಳಿಯ ವೇಗವನ್ನು ಮೇಲ್ವಿಚಾರಣೆ ಮಾಡಲು ಪ್ರಮುಖ ಮೇಲ್ಸೇತುವೆಗಳಲ್ಲಿ ಅನಿಮೋಮೀಟರ್‌ಗಳನ್ನು ಮತ್ತು ಪ್ರಮುಖ ನದಿ ಸೇತುವೆಗಳಲ್ಲಿ ಪ್ರವಾಹ ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಕಡಿಮೆ ದೃಶ್ಯಗೋಚರತೆ ಇದ್ದಾಗ ರೈಲುಗಳ ವೇಗವನ್ನು ಗಂಟೆಗೆ 40 ಕಿ.ಮೀಗೆ ನಿಯಂತ್ರಿಸಲು ಮತ್ತು ಹಳಿಗಳ ಮೇಲೆ 100 ಮಿ.ಮೀ ಗಿಂತ ಹೆಚ್ಚು ನೀರು ನಿಂತರೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಲೋಕೋ ಪೈಲಟ್‌ಗಳಿಗೆ ಸೂಚಿಸಲಾಗಿದೆ. ತುರ್ತು ಚಿಕಿತ್ಸೆಗಾಗಿ ಕಾರವಾರ, ಉಡುಪಿ, ಮಡಗಾಂವ್‌ಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದ್ದು, ಎಲ್ಲಾ ರೈಲುಗಳ ಪ್ಯಾಂಟ್ರಿ ಕಾರ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಬೆಲಾಪುರ, ರತ್ನಗಿರಿ ಮತ್ತು ಮಡಗಾಂವ್‌ಗಳಲ್ಲಿ 24*7 ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ.
ಪ್ರಯಾಣಿಕರು ನೈಜ-ಸಮಯದ ರೈಲು ಸ್ಥಿತಿಗತಿಗಾಗಿ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಬಹುದು ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net