ರೈತರಿಗೆ ಬಿಸಿ ತುಪ್ಪವಾದ ಶೇಂಗಾ ಬಿತ್ತನೆ ಬೀಜ discount

ಮೊಳಕಾಲ್ಮೂರಿನಲ್ಲಿ ಉತ್ತಮ ಮಳೆಯಾಗಿರುವ  ಹಿನ್ನೆಲೆಯಲ್ಲಿ ಭೂಮಿ ಹಸನು ಮಾಡುವ ಕಾರ್ಯದಲ್ಲಿ ತೊಡಗಿರುವ ರೈತರು.discount
ಮೊಳಕಾಲ್ಮೂರಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಭೂಮಿ ಹಸನು ಮಾಡುವ ಕಾರ್ಯದಲ್ಲಿ ತೊಡಗಿರುವ ರೈತರು.discount
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿ ಕ್ವಿಂಟಾಲ್‌ಗೆ 9,200ರೂ. ನಿಗದಿ
  • ಕಳೆದ ಬಾರಿಗಿಂತ 3,300ರೂ. ಹೆಚ್ಚಳ
  • ಜೂನ್ - ಜುಲೈ ತಿಂಗಳಲ್ಲಿ ಬಿತ್ತನೆ ಕಾರ್ಯ
ಕೆ. ಕೆಂಚಪ್ಪ ಮೊಳಕಾಲ್ಮೂರು
ಮಳೆಯಾದ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಪ್ರತಿ ಕ್ವಿಂಟಾಲ್ ಬಿತ್ತನೆ ಶೇಂಗಾ ಬೀಜಕ್ಕೆ 9200ರೂ. ನಿಗದಿಪಡಿಸಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ಕಳೆದ ಬಾರಿಗಿಂತ 3,300ರೂ. ದರ ಹೆಚ್ಚಿಸಿರುವ ಸರ್ಕಾರದ ನಡೆ ಅನ್ನದಾತನ ಕೆಂಗಣ್ಣಿಗೆ ಗುರಿಯಾಗಿದೆ.discount
ಚಳ್ಳಕೆರೆ- ಮೊಳಕಾಲ್ಮೂರು ತಾಲೂಕುಗಳಲ್ಲಿ ಶೇಂಗಾ ಪ್ರಧಾನ ಬೆಳೆ. ಅಂದಾಜು 40 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯುವುದು ವಾಡಿಕೆ. ಬೀಜ, ಗೊಬ್ಬರ ರಿಯಾಯಿತಿ ದರದಲ್ಲಿ ವಿತರಣೆ ಮಾಡಬೇಕಿದ್ದ ಸರ್ಕಾರ ದುಪ್ಪಟ್ಟು ಬೆಲೆ ಏರಿಸಿ ರೈತರ ಜೇಬಿಗೆ ಕತ್ತರಿ ಹಾಕಿರುವುದು ಮೊದಲೇ ಸಂಕಷ್ಟದಲ್ಲಿರುವ ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ವರ್ಷ ಸಬ್ಸಿಡಿ ದರದಲ್ಲಿ ಪ್ರತಿ ಕ್ವಿಂಟಾಲ್ ಶೇಂಗಾಕ್ಕೆ ಎಸ್ಸಿ-ಎಸ್ಟಿಗೆ 9200ರೂ., ಸಾಮಾನ್ಯ ವರ್ಗದವರಿಗೆ 9900ರೂ. ದರ ನಿಗದಿ ಮಾಡಲಾಗಿದೆ. ಕಳೆದ ವರ್ಷ ಟಿಎಂವಿ-2 ತಳಿಯ ಕ್ವಿಂಟಾಲ್ ಶೇಂಗಾ ಬಿತ್ತನೆ ಕಾಯಿಗೆ ಎಸ್ಸಿ-ಎಸ್ಟಿ ರೈತರಿಗೆ 5900 ರೂ., ಸಾಮಾನ್ಯರಿಗೆ 6600ರೂ. ನಿಗದಿ ಮಾಡಲಾಗಿತ್ತು. ಪ್ರಸ್ತುತ ಬೆಲೆ ಏರಿಕೆ ಮಾಡಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸರ್ಕಾರದ ಸಹಬಾಗಿತ್ವದ ಕಂಪನಿಗಳು ಶೇಂಗಾ ಬಿತ್ತನೆ ಕಾಯಿ ಖರೀದಿ ಮಾಡುವ ಅವಧಿಯಲ್ಲಿ ಪ್ರತಿ ಕ್ವಿಂಟಾಲ್‌ಗೆ 11ರಿಂದ 12 ಸಾವಿರ ರೂ. ಬೆಲೆ ಏರಿಕೆ ಮಾಡಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.
ಕಳೆದ ವರ್ಷ ಮಳೆ ಅಭಾವದಿಂದ ಬೆಳೆಗಳು ನಷ್ಟಕ್ಕೆ ತುತ್ತಾಗಿ ರೈತರು ಸಂಕಷ್ಟಕ್ಕೆ ಸಿಲುಕಿದರು. ಕೃಷಿ ಇಲಾಖೆ ವಿತರಣೆ ಮಾಡುವ ಬಿತ್ತನೆ ಬೀಜಕ್ಕೆ ಈ ಬಾರಿ ಬಹು ಬೇಡಿಕೆ ಇದೆ. ತಾಲೂಕಿನಲ್ಲಿ 32,500 ಹೆ. ಪ್ರದೇಶದ ಪೈಕಿ 17,900 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಇದೆ. ರೈತರ ಬೇಡಿಕೆ ಅನುಸಾರ 6,900 ಕ್ವಿಂಟಾಲ್ ವಿತರಣೆ ಮಾಡುವಂತೆ ಸರ್ಕಾರಕ್ಕೆ ಕೃಷಿ ಇಲಾಖೆ ಶಿಫಾರಸ್ಸು ಪತ್ರ ರವಾನಿಸಿದೆ.
ಮೊಳಕಾಲ್ಮೂರು ಹಾಗೂ ರಾಂಪುರ ರೈತಸಂಪರ್ಕ ಕೇಂದ್ರದಲ್ಲಿ 500 ಕ್ವಿಂ. ಶೇಂಗಾ ಬಿತ್ತನೆ ಕಾಯಿ ದಾಸ್ತಾನಿದೆ. ಉಳಿದಂತೆ ಮುಂಗಾರು ಹಂಗಾಮಿನ ಸಜ್ಜೆ, ನವಣೆ, ತೊಗರಿ ಇತ್ಯಾದಿ ಬೀಜ ವಿತರಣೆಗೆ ಸಿದ್ದವಾಗಿವೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ 4500 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿರುವ ಹತ್ತಿ ಬೆಳೆ ಈಗಾಗಲೆ ಕಾಯಿ ಕಟ್ಟುತ್ತಿದೆ. ಈ ವರ್ಷ ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಪ್ರಯುಕ್ತ ರೈತರು ಬಿತ್ತನೆ ಪೂರ್ವ ಬೇಸಾಯ ಆರಂಭಿಸಿದ್ದಾರೆ.
ಜೂನ್ ಹಾಗೂ ಜುಲೈ ತಿಂಗಳಲ್ಲಿ ಶೇಂಗಾ ಬಿತ್ತನೆ ಕಾರ್ಯ ನಡೆಯಲಿದೆ. 7,786 ಮೆಟ್ರಿಕ್ ಟನ್ ಗೊಬ್ಬರಕ್ಕೆ ಬೇಡಿಕೆ ಇದೆ. ಡಿಎಪಿ, ಕಾಂಪ್ಲೆಕ್ಸ್ ಹಾಗೂ ಮೇಲುಗೊಬ್ಬರ ದಾಸ್ತಾನಿಗೆ ಕ್ರಮ ವಹಿಸಲಾಗಿದೆ. ರೈತರು ಆದಾಯದ ದೃಷ್ಟಿಯಿಂದ ಮಿಶ್ರ ಬೆಳೆ ಪದ್ಧತಿ ಅನುಸರಿಸುವುದು ಸೂಕ್ತ. ಮಣ್ಣಿನ ಹವಾಗುಣಕ್ಕೆ ಅನುಗುಣವಾಗಿ ಬೆಳೆ ಹಾಗೂ ಸಾವಯವ ಗೊಬ್ಬರ ಬಳಕೆ ಮಾಡಿದರೆ ಭೂಮಿ ಫಲವತ್ತತೆ ಸುಧಾರಿಸಲಿದೆ ಎಂದು ಕೃಷಿ ಅಧಿಕಾರಿ ಡಾ. ಮಂಜುನಾಥ ತಿಳಿಸಿದ್ದಾರೆ.
"

ಸರ್ಕಾರ ಶೇಂಗಾ ಬಿತ್ತನೆ ಬೀಜದ ಬೆಲೆ ಏರಿಸಿರುವ ನಡೆ ಕೃಷಿಗೆ ಕೊಳ್ಳಿ ಇಟ್ಟಂತಾಗಿದೆ. ಹೋದ ವರ್ಷದ ಬೆಳೆ ನಷ್ಟ ಪರಿಹಾರವೂ ಇಲ್ಲ. ಇತ್ತ ವಿಮಾ ಪರಿಹಾರವನ್ನೂ ನೀಡದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ. ಕಳೆದ ವರ್ಷದ ಮಾದರಿಯಲ್ಲಿ ಬೀಜ ವಿತರಣೆಗೆ ಸರ್ಕಾರ ಮುಂದಾಗಬೇಕು.

— -ಬೇಡರಡ್ಡಿಹಳ್ಳಿ ಬಸವರಡ್ಡಿ, ರಾಜ್ಯ ಕಾರ್ಯಾಧ್ಯಕ್ಷ, ರೈತಸಂಘ.

"

ಕಳೆದ ವರ್ಷ ಮಳೆಯ ಅಭಾವದಿಂದ ಭೂಮಿಗೆ ಹಾಕಿದ ಬಂಡವಾಳ ಕೈಸೇರಲಿಲ್ಲ. ರೈತರ ಮನೆಯಲ್ಲಿ ಒಂದು ಸೇರು ಶೇಂಗಾ ಬೀಜ ಸಿಗುವುದು ಕಷ್ಟ. ಜನ, ಜಾನುವಾರುಗಳ ಸ್ಥಿತಿ ಶೋಚನೀಯವಾಗಿದೆ. ಹೀಗಿರುವಾಗ ಬಿತ್ತನೆ ಬೀಜದ ಬೆಲೆ ಏರಿಕೆ ನುಂಗಲಾರದ ತುತ್ತಾಗಿದೆ. ಖಾಸಗಿಯವರಲ್ಲೇ ಶೇಂಗಾ ಬೀಜ ಕಡಿಮೆ ಬೆಲೆಗೆ ಸಿಗುತ್ತದೆ. ಸರ್ಕಾರದ ನಡೆ ಒಳ್ಳೆಯದಲ್ಲ.

— -ಕೆ. ತಿಪ್ಪೇಸ್ವಾಮಿ, ತುಮಕೂರ‌್ಲಹಳ್ಳಿ ರೈತ.

"

ಮಳೆರಾಯ ಕಣ್ಣಾ ಮುಚ್ಚಾಲೆ ಆಟದಲ್ಲಿ ರೈತರು ಬೆಳೆಗಳಿಲ್ಲದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರಗಳೂ ಸಹಿತ ರೈತರ ಹಿತ ಕಾಯುವಲ್ಲಿ ವಿಫಲವಾಗಿವೆ. ಪರಿಹಾರ ವಿತರಣೆ ವಿಷಯದಲ್ಲಿ ಮೊಂಡುತನ ತೋರುತ್ತಿರುವುದರಿಂದ ರೈತರು ಕೃಷಿಯನ್ನೇ ಕೈಬಿಡುವ ಪರಿಸ್ಥಿತಿ ಉದ್ಭವಿಸಿದೆ.

— - ಸೂರಮ್ಮನಹಳ್ಳಿ ರಾಜಣ್ಣ, ತಾಲೂಕು ಅಧ್ಯಕ್ಷ, ರೈತಸಂಘ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net