ಅಧಿಕಾರಿಗಳು ಕೆಲಸ ಮಾಡದಿದ್ದರೆ ಶಿಸ್ತುಕ್ರಮ

ಹೊಸದುರ್ಗ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿದರು. ತಹಸೀಲ್ದಾರ್ ತಿರುಪತಿ ವಿ. ಪಾಟೀಲ್, ಮಹಮ್ಮದ್ ಇಸ್ಮಾಯಿಲ್ಇದ್ದರು.
ಹೊಸದುರ್ಗ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿದರು. ತಹಸೀಲ್ದಾರ್ ತಿರುಪತಿ ವಿ. ಪಾಟೀಲ್, ಮಹಮ್ಮದ್ ಇಸ್ಮಾಯಿಲ್ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಜಿ. ಗೋವಿಂದಪ್ಪ ಎಚ್ಚರಿಕೆ
  • ಕೆಡಿಪಿ ಸಭೆಯಲ್ಲಿ ಪ್ರಗತಿ ಪರಿಶೀಲನೆ
  • ಅಸಮರ್ಪಕ ಕಾರ್ಯನಿರ್ವಹಣೆಗೆ ತರಾಟೆ
ಹೊಸದುರ್ಗ: ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಕಳಿಸುವ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ, ಪಡಿತರ ಅಕ್ಕಿ ಮತ್ತು ರಾಗಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರ್ಕಾರದ ಹಣ ಬಳಕೆಯಾಗುತ್ತಿಲ್ಲ, ಅಧಿಕಾರಿಗಳು ಮೈಚಳಿ ಬಿಟ್ಟು ಕೆಲಸ ಮಾಡದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ಮಾತುಗಳು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಕೇಳಿ ಬಂದವು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಜಿ. ಗೋವಿಂದಪ್ಪ ತಾಲೂಕಿನ ಪ್ರಗತಿ ಪರಿಶೀಲನೆ ನಡೆಸಿ ಅಸಮರ್ಪಕ ಕಾರ್ಯ ನಿರ್ವಹಣೆ ತೋರಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆರೋಗ್ಯ ಇಲಾಖೆಯ ಬೇಜವಾಬ್ದಾರಿ ವರ್ತನೆಗೆ ಗರಂ ಆದ ಶಾಸಕರು, ಸರ್ಕಾರಿ ಆಸ್ಪತ್ರೆಗಳು ಬಡವರ ಆರೋಗ್ಯ ಸುಧಾರಣೆಗೆ ಪೂರಕವಾಗಿ ಕೆಲಸ ಮಾಡಬೇಕು. ಆದರೆ, ಅಲ್ಲಿಗೆ ಬರುವ ರೋಗಿಗಳನ್ನು ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಿಗೆ ಕಳಿಸುವ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಖಾಸಗಿಯಾಗಿ ದುಡಿಯುವ ಆಸೆ ಇದ್ದರೆ ರಾಜೀನಾಮೆ ನೀಡಿ ಹೋಗಲಿ ಎಂದರು.
ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಆಸ್ಪತ್ರೆಯ ಪ್ರಸೂತಿ ಮಹಿಳಾ ವೈದ್ಯರ ಕುರಿತು ಸಾಕಷ್ಟು ದೂರುಗಳಿವೆ. ಹೆರಿಗೆ ಮಾಡಿಸುವುದಿಲ್ಲ, ರೋಗಿಯನ್ನು ಮುಟ್ಟಿ ಪರೀಕ್ಷಿಸುವುದಿಲ್ಲ, ಅನವಶ್ಯಕವಾಗಿ ಕಾಯಿಸಿ ಮುಂದಿನ ಆಸ್ಪತ್ರೆಗೆ ಸಾಗು ಹಾಕುತ್ತಾರೆ. ಶೀಘ್ರದಲ್ಲೇ ಆರೋಗ್ಯ ಸಚಿವರನ್ನು ಕರೆದುಕೊಂಡು ಆಸ್ಪತ್ರೆಗೆ ಬರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಿದ ರಾಗಿಗೆ ಏಪ್ರಿಲ್ ತಿಂಗಳವರೆಗೆ ಹಣ ನೀಡಲಾಗಿದೆ. ಉಳಿದವರಿಗೆ ಶೀಘ್ರದಲ್ಲೇ ನೀಡಲಾಗುವುದು. ತಾಲೂಕಿನಲ್ಲಿ ಪಡಿತರ ಅಕ್ಕಿ ಮತ್ತು ರಾಗಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಾರಾಟಗಾರರು ಅಕ್ರಮವಾಗಿ ಕಳಪೆ ರಾಗಿಯನ್ನು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡುತ್ತಿದ್ದಾರೆ. ಮುಂದಿನ ಬಾರಿ ಅಧಿಕಾರಿಗಳು ಅಕ್ರಮ ತಡೆಯದಿದ್ದರೆ ಕ್ರಮ ಜರುಗಿಸಲಾಗುವುದು ಎಂದರು.
ಪಟ್ಟಣದ ಮುಖ್ಯರಸ್ತೆ ಹಾಗೂ ಹಿರಿಯೂರು ರಸ್ತೆ ಅಭಿವೃದ್ಧಿಗೆ 12.5ಕೋಟಿ ರೂ. ಹಣ ನೀಡಿ 6 ತಿಂಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನ ಇದಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಹೋಗದೆ ಕಚೇರಿಯಲ್ಲೇ ಕುಳಿತು ಕಾಲಹರಣ ಮಾಡುತ್ತಿರುವುದೇ ವಿಳಂಬಕ್ಕೆ ಕಾರಣ. ನಿರ್ಮಿತಿ ಕೇಂದ್ರ, ಕೆಆರ್‌ಡಿಎಲ್, ಲೋಕೋಪಯೋಗಿ ಇಲಾಖೆ ಸೇರಿ ವಿವಿಧ ಇಲಾಖೆಗಳು ನಿರ್ವಹಿಸುತ್ತಿರುವ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳಬೇಕು ಎಂದು ತಾಕೀತು ಮಾಡಿದರು.
ವಿವಿ ಸಾಗರದ ಕೋಡಿ ಬಳಿ ಸೇತುವೆ ನಿರ್ಮಾಣಕ್ಕೆ 25ಕೋಟಿ ರೂ. ಅನುದಾನ ಮಂಜೂರಾಗಿದೆ. ಕಂದಾಯ, ಪಂಚಾಯತ್ ರಾಜ್ ಹಾಗೂ ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸ್ಥಳ ಗುರುತಿಸಿ ಕಾಮಗಾರಿ ಆರಂಭಕ್ಕೆ ಕ್ರಮ ವಹಿಸಬೇಕು. ಕೆಎಂಆರ್‌ಸಿಎಲ್ ನೀಡಿರುವ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಬೆಸ್ಕಾಂ ಅಧಿಕಾರಿಗಳು ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆಯಲ್ಲಿ ಜಾಗೃತಿ ವಹಿಸಬೇಕು. ರಾಜ್ಯ ಸರ್ಕಾರ ಜನರ ವಿದ್ಯುತ್ ಬಿಲ್ ಪಾವತಿಸುತ್ತಿದೆ. ಇದನ್ನು ಜನರಿಗೆ ತಿಳಿಸಬೇಕು. ಕುಡಿಯುವ ನೀರಿನ ಪಂಪ್‌ಸೆಟ್ಗಳಿಗೆ ಯಾವುದೇ ಕಾರಣ ಹೇಳದೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ನೂತನ ಬೆಸ್ಕಾಂ ಕಚೇರಿಯನ್ನು ಇಂಧನ ಸಚಿವರಿಂದ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ತಾಲೂಕಿಗೆ 90 ಹೊಸ ಅಂಗನವಾಡಿ ಕಟ್ಟಡ ಮಂಜೂರು ಮಾಡಿಸಲಾಗಿದೆ. ಪಟ್ಟಣದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಹೊಸ ಕಟ್ಟಡ ಒದಗಿಸಲಾಗಿದೆ. ಕಾರ್ಯಕರ್ತೆಯರ ಹುದ್ದೆ ಖಾಲಿ ಇರುವ ಅಂಗನವಾಡಿಗಳಿಗೆ ತಡ ಮಾಡದೆ ಕಾರ್ಯಕರ್ತರನ್ನು ಆಯ್ಕೆ ಮಾಡಬೇಕು. ಮಕ್ಕಳ ಶಿಕ್ಷಣ ಮತ್ತು ಪೋಷಣೆಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ತಹಸೀಲ್ದಾರ್ ತಿರುಪತಿ ವಿ. ಪಾಟೀಲ್, ತಾಪಂ ಇಒ ಸುನಿಲ್ಕುಮಾರ್, ಕೆಡಿಪಿ ಸದಸ್ಯರಾದ ಪದ್ಮನಾಭ, ನಿರಂಜನ ಮೂರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net