ಕೃಷಿ ವಿಜ್ಞಾನ ಮರು ಪರೀಕ್ಷೆ ಸ್ಥಗಿತಗೊಳಿಸಲು ಆಗ್ರಹ

ಹಿರಿಯೂರು ತಾಲೂಕಿನ ಬಬ್ಬೂರು ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಕೆಸಿಇಟಿ ಕೃಷಿ ಪ್ರಾಯೋಗಿಕ ಪರೀಕ್ಷೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪಾಲಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹಿರಿಯೂರು ತಾಲೂಕಿನ ಬಬ್ಬೂರು ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಕೆಸಿಇಟಿ ಕೃಷಿ ಪ್ರಾಯೋಗಿಕ ಪರೀಕ್ಷೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪಾಲಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • 2ಸಾವಿರ ಜನ ಪಾಲಕರಿಂದ ಪ್ರತಿಭಟನೆ
  • ಪೊಲೀಸರು, ಅಧಿಕಾರಿಗಳ ಜತೆ ಜಟಾಪಟಿ
  • ಕಿಟಕಿ ಗಾಜು, ಹೂವಿನಕುಂಡ ಒಡೆದು ಆಕ್ರೋಶ
ಹಿರಿಯೂರು: ತಾಲೂಕಿನ ಬಬ್ಬೂರು ತೋಟಗಾರಿಕೆ ಕಾಲೇಜಿನಲ್ಲಿ ಸೋಮವಾರ ನಡೆದ ಕೃಷಿ ವಿಜ್ಞಾನ ಪ್ರಾಯೋಗಿಕ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿಭಟನೆ ನಡೆಸಿದರು.
ಮೇ 10ರಂದು ತೋಟಗಾರಿಕೆ ಮಹಾವಿದ್ಯಾಲಯ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ 74 ವಿದ್ಯಾರ್ಥಿಗಳಿಗೆ 200 ಪೂರ್ಣ ಅಂಕ ನೀಡಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಈ ಬಗ್ಗೆ ತನಿಖೆಗೆ ವಿದ್ಯಾರ್ಥಿಗಳು, ಪಾಲಕರು ಒತ್ತಾಯಿಸಿದ್ದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (ಶಿವಮೊಗ್ಗ) ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ, ಕಾಲೇಜಿನ ಡೀನ್- ಪರೀಕ್ಷಾ ಸಿಬ್ಬಂದಿಯಿಂದ ಮಾಹಿತಿ ಪಡೆದು, ಸಿಸಿ ಟಿವಿ ಪರಿಶೀಲನೆ ನಡೆಸಿದ್ದರು. ಪಾಲಕರು, ಎಬಿವಿಪಿ ಸಂಘಟನೆ ಒತ್ತಾಯದಂತೆ ಜೂ.1ರಂದು ಮರು ಪರೀಕ್ಷೆ ನಡೆಯಿತು.
ಸೋಮವಾರ ಬೆಳಗ್ಗೆ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು, ಪಾಲಕರು ಆಗಮಿಸಿದ್ದರು. 2090 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಮುಗಿಸಿ ಬಂದ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು, ಔಟ್ ಆಫ್ ಸಿಲೆಬಸ್, ಕಠಿಣ ಪ್ರಶ್ನೆ ಕೇಳಲಾಗಿದೆ ಎಂದು ಹೇಳಿದಾಗ ಪಾಲಕರು ಆತಂಕಕ್ಕೆ ಒಳಗಾಗಿ ಏಕಾಏಕಿ ಪರೀಕ್ಷಾ ಕೇಂದ್ರದ ಮುಖ್ಯದ್ವಾರದ ಬಳಿ ಜಮಾಯಿಸಿದರು.
ಪರೀಕ್ಷೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕಾಲೇಜಿನ ಕಿಟಕಿ, ಹೂವಿನ ಕುಂಡ ಒಡೆದು ಹಾಕಿ, ಮುಖ್ಯ ಬಾಗಿಲಿನಿಂದ ಪರೀಕ್ಷಾ ಕೇಂದ್ರದ ಒಳಗೆ ಹೋಗಲು ಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೋಲಿಸರು, ತಹಸೀಲ್ದಾರ್ ಸ್ಥಳಕ್ಕೆ ಬಂದು ಪಾಲಕರನ್ನು ಸಮಾಧಾನಪಡಿಸಲು ಯತ್ನಿಸಿದರು. ಆಗ ಪೊಲೀಸರು- ಪಾಲಕರ ನಡುವೆ ಮಾತಿನ ಚಕಮಕಿ ನಡೆಯಿತು.
ಅನುಮಾನ ಏಕೆ?
ಮೇ 10ರಂದು ರಾಜ್ಯದಲ್ಲಿ 22ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಬಬ್ಬೂರು ಪರೀಕ್ಷಾ ಕೇಂದ್ರದಲ್ಲಿ 2180 ವಿದ್ಯಾರ್ಥಿಗಳಲ್ಲಿ 74ಮಂದಿ 200 ಪೂರ್ಣ ಅಂಕ ಪಡೆದಿದ್ದಾರೆ. ಇದನ್ನು ಅನುಮಾನದಿಂದ ನೋಡುವುದು ಎಷ್ಟು ಸರಿ? ರೈತರ ಮಕ್ಕಳಿಗೆ ಆದ ಅನ್ಯಾಯ ಸರಿಪಡಿಸುವವರು ಯಾರು, ದೂರದ ಊರುಗಳಿಂದ ಬೆಳಗ್ಗೆ 3ಗಂಟೆಗೆ ಮನೆ ಬಿಟ್ಟು ಇಲ್ಲಿಗೆ ಬಂದರೆ ಮತ್ತೆ ಅನ್ಯಾಯ ನಡೆದಿದೆ. ಯಾವುದೇ ಕಾರಣಕ್ಕೂ ಮರು ಪರೀಕ್ಷೆ ಫಲಿತಾಂಶ ಪ್ರಕಟಿಸಬಾರದು. ಮೇ 10ರ ಫಲಿತಾಂಶ ಮಾನ್ಯ ಮಾಡದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಪಾಲಕರು ಎಚ್ಚರಿಸಿದರು.
ಮೇ 10ರಂದು ನಡೆದ ಪರೀಕ್ಷೆಯಲ್ಲಿ ಸರಳವಾಗಿ ಪ್ರಶ್ನೆ ಕೇಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಮರು ಪರೀಕ್ಷೆ ನಡೆಸುವುದಾದರೆ, ಇಂದು ಔಟ್ ಆಫ್ ಸಿಲಬಸ್, ಕಠಿಣ ಪ್ರಶ್ನೆ ಕೇಳಲಾಗಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಮರು ಪರೀಕ್ಷೆಗೆ ಹಾಜರಾಗಲು ಹೊಸದಾಗಿ ಪ್ರವೇಶ ಪತ್ರ ನೀಡಿಲ್ಲ, ಪರೀಕ್ಷಾ ಕೇಂದ್ರದ ಸಿಸಿ ಟಿವಿ ಪರಿಶೀಲನೆ ನಡೆಸಲಾಗಿದ್ದು, ಇಲ್ಲಿ ಯಾವುದೇ ಪರೀಕ್ಷಾ ಅಕ್ರಮ ನಡೆದಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪ್ರತಿಪಾದಿಸಿದರು.
ಘಟನೆಯಿಂದ ಮಹಾವಿದ್ಯಾಲಯದ ಸಂಪರ್ಕ ರಸ್ತೆ ಜಾಮ್ ಆಗಿತ್ತು. ನೂರಾರು ಪಾಲಕರು ಜಮಾಯಿಸಿ, ಪರೀಕ್ಷೆ ಸ್ಥಗಿತಗೊಳಿಸಬೇಕು, ಮಕ್ಕಳನ್ನು ಹೊರಗೆ ಕಳುಹಿಸಬೇಕೆಂದು ಪಟ್ಟು ಹಿಡಿದರು. ಆಗ ಪೊಲೀಸರು, ಪರೀಕ್ಷಾರ್ಥಿಗಳು ಸ್ವಲ್ಪ ಸಮಯ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಇರುವಂತೆ ನೋಡಿಕೊಂಡರು.
ಗಲಾಟೆ ಮಾಡಿದರೆ ಪ್ರಯೋಜನವಾಗದು. ಅನ್ಯಾಯದ ಬಗ್ಗೆ ಲಿಖಿತವಾಗಿ ಮನವಿ ಕೊಡಿ, ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಕೃಷಿ ಇಲಾಖೆ ಜಿಲ್ಲಾ ನಿರ್ದೇಶಕ ಮಂಜುನಾಥ್ ಮನವಿ ಮಾಡಿದರು. ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ತಾಳ್ಮೆ ವಹಿಸುವಂತೆ ಹೆಚ್ಚುವರಿ ಎಸ್ಪಿ ಶಿವಕುಮಾರ್ ಕೋರಿದರು. ಸರ್ಕಾರದ ಆದೇಶದ ಪ್ರಕಾರ ಮರು ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ-ತೋಟಗಾರಿಕೆ ವಿವಿ ಅಧಿಕಾರಿ ಡಾ. ಹೇಮ್ಲಾನಾಯಕ್ ಸ್ಪಷ್ಟಪಡಿಸಿದರು.
ತಹಸೀಲ್ದಾರ್ ಎಂ.ಸಿದ್ದೇಶ್, ಸಿಪಿಐ ಗುಡ್ಡಪ್ಪ, ಪಿಎಸ್‌ಐ ದೇವರಾಜ್, ಮಹೇಶ್ ಇದ್ದರು.

ರೈತ ಮಕ್ಕಳಿಗೆ ಅನ್ಯಾಯವಾದರೆ ಕೇಳುವರು ಯಾರೂ ಇಲ್ಲ, ಜೀವ ಕೈಯಲ್ಲಿಡಿದು ಮಳೆಯಲ್ಲಿ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದು, ಮರು ಪರೀಕ್ಷೆಯಲ್ಲಿ ಮತ್ತೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು.

— -ಮೋಹನ್‌ಕುಮಾರ್, ಚಿಕ್ಕನಾಯಕನಹಳ್ಳಿ ತಾಲೂಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net