

ಚಿಕ್ಕಮಗಳೂರು: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಅರ್ಧಗಂಟೆ ರಸ್ತೆಯಲ್ಲೇ ನರಳಾಡಿ ಕರೊನಾ ವಾರಿಯರ್ಸ್ ಪ್ರಾಣ ಬಿಟ್ಟಿರುವ ಘಟನೆ ತರೀಕೆರೆಯ ಲಕ್ಕವಳ್ಳಿ ಕ್ರಾಸ್ನಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಮುಂಚೆಯೇ ಬಂದರೂ ಸಮಯ ಪ್ರಜ್ಞೆ ಮೆರೆಯದ ಬಿಜೆಪಿ ಶಾಸಕ ಸುರೇಶ್ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮೃತಪಟ್ಟ ಕರೊನಾ ವಾರಿಯರ್ನನ್ನು ರಮೇಶ್ ಎಂದು ಗುರುತಿಸಲಾಗಿದೆ. ಹೆಲ್ತ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಮೇಶ್, ನಿನ್ನೆ ಕರೊನಾ ಕರ್ತವ್ಯ ಮುಗಿಸಿ ಬರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿತ್ತು.
ಇದೇ ವೇಳೆ ಶಾಸಕ ಸುರೇಶ್ ಅವರ ಕಾರು ಅಲ್ಲಿಗೆ ಬಂದಿತ್ತು. ಆಂಬ್ಯುಲೆನ್ಸ್ ಕರೆ ಮಾಡಿದರೂ ಅರ್ಧ ಗಂಟೆಯಾದ್ರೂ ಬರಲೇ ಇಲ್ಲ. ಇತ್ತ ರಮೇಶ್ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದರೂ ಶಾಸಕರು ಮಾತ್ರ ಕಾರು ನಿಲ್ಲಿಸಿಕೊಂಡು ಕಾರಿನೊಳಗಡೆಯೇ ಕುಳಿತಿದ್ದರು.
ತಡವಾಗಿ ಬಂದ ಆಂಬ್ಯುಲೆನ್ಸ್ನಲ್ಲಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ರಮೇಶ್ ಕೊನೆಯುಸಿರೆಳೆದಿದ್ದಾರೆ. ಶಾಸಕರು ಸಮಯ ಪ್ರಜ್ಞೆ ಮೆರೆದಿದ್ದರೆ ರಮೇಶ್ ಜೀವ ಉಳಿಯುತ್ತಿತ್ತು. ಕೇವಲ ಎರಡು ನಿಮಿಷದ ಪ್ರಯಾಣದ ಅಂತರದಲ್ಲೇ ಆಸ್ಪತ್ರೆ ಇತ್ತು. ಆದರೆ, ಶಾಸಕರ ನಿರ್ಲಕ್ಷ್ಯದಿಂದ ಒಬ್ಬ ಕರೊನಾ ವಾರಿಯರ್ನನ್ನು ಕಳೆದುಕೊಂಡಂತಾಗಿದೆ. (ದಿಗ್ವಿಜಯ ನ್ಯೂಸ್)