More

    ಬಿಎಸ್​ವೈ ವಿರುದ್ಧ ಬಿಜೆಪಿಯೊಳಗೇ ಪ್ರತಿಪಕ್ಷ; ಸಿಎಂ ಬದಲಾವಣೆ ನೆಪದಲ್ಲಿ ಕಮಲವೇ ಖೆಡ್ಡಕ್ಕೆ, ಯಡಿಯೂರಪ್ಪ ಬೆನ್ನಿಗೆ ನಿಂತ ಡೆಲ್ಲಿ ವರಿಷ್ಠರು

    ಬೆಂಗಳೂರು: ಕರೊನಾ ಪಿಡುಗು ನಾಡಿನ ಜೀವಹಿಂಡುತ್ತಿರುವ ಮಧ್ಯೆ ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ. ಈ ಮೇಲಾಟದಲ್ಲಿ ಆಡಳಿತ ಪಕ್ಷದೊಳಗೇ ಪ್ರತಿಪಕ್ಷ ರಚನೆಯಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಯಾಗಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನ ತುಂಬುವ ಯಾವ ನಾಯಕರೂ ಸಿಗದೆ ನಾಯಕತ್ವ ಬದಲಾವಣೆಗೆ ಕೈಹಾಕಿದರೆ ದೊಡ್ಡ ಅವಾಂತರಕ್ಕೆ ತಾವೇ ಕಾರಣವಾಗುತ್ತೇವೆ ಎಂದು ಅರಿತಿರುವ ಪಕ್ಷದ ದೆಹಲಿ ನಾಯಕರು, ಬಿಎಸ್​ವೈ ಅವರನ್ನೇ ಮುಂದುವರಿಸಲು ನಿರ್ಧರಿಸಿದ್ದಾರೆ. ಈ ಕಾರಣದಿಂದ ತಾಳ್ಮೆ ಕಳೆದುಕೊಂಡಿರುವ ರಾಜ್ಯ ಬಿಜೆಪಿಯ ಒಂದು ಗುಂಪು ಶತಾಯಗತಾಯ ಕನಸು ಈಡೇರಿಸಿಕೊಳ್ಳಲೇಬೇಕೆಂದು ಮತ್ತೆ ತಂತ್ರ ರೂಪಿಸಲು ಆರಂಭಿಸಿದೆ.

    ಯಡಿಯೂರಪ್ಪ ಪರ ನಿಲ್ಲುವುದು ಸದ್ಯದ ಪರಿಸ್ಥಿತಿಯಲ್ಲಿ ಹೈಕಮಾಂಡ್​ಗೂ ಅನಿವಾರ್ಯ. ಇದಕ್ಕೆ ಪೂರಕವಾಗಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿಯಿಂದ ಸ್ಪಷ್ಟನೆಗಳೂ ಬರುತ್ತಿವೆ. ಇಷ್ಟಾದರೂ ಪಕ್ಷದಲ್ಲಿ ಚಟುವಟಿಕೆ ನಿಂತಿಲ್ಲ. ಸದ್ಯ ರಾಜ್ಯದಲ್ಲಿ ಕಮಲ ಪಾಳಯದ ಹತ್ತು ಮುಖಂಡರು ಮುಖ್ಯಮಂತ್ರಿ ಆಗುವ ಕನಸು ಕಾಣಲಾರಂಭಿಸಿದ್ದಾರೆ. ಒಬ್ಬ ನಾಯಕರಂತೂ ಪ್ರಮಾಣವಚನಕ್ಕೆ ದಿನಾಂಕ ನಿಗದಿ ಮಾಡಿಕೊಂಡು ಜಿಲ್ಲಾ ಪ್ರವಾಸದ ನೆಪದಲ್ಲಿ ಎಲ್ಲ ಮಠ ಮಾನ್ಯಗಳಿಗೆ ಭೇಟಿ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಮತ್ತೊಬ್ಬರು ಯಾವ್ಯಾವ ಅಧಿಕಾರಿಗಳನ್ನು ತಮ್ಮ ಆಡಳಿತಕ್ಕೆ ಇಟ್ಟುಕೊಂಡರೆ ಸೂಕ್ತ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಣ ಹಂಚಿಕೆಯಿಂದ ಅಧಿಕಾರ ದಕ್ಕಿಸಿಕೊಳ್ಳಬಹುದು ಎಂಬ ಅವರ ಆಪ್ತರ ಸಲಹೆ ಅವರಿಗೇ ತಿರುಗೇಟು ನೀಡುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಈ ವದಂತಿಗಳಿಂದಾಗಿ ಹೊಸ ಸಿಎಂ ಯಾರಾಗಬಹುದು, ಅವರ ಸಾಮರ್ಥ್ಯವೆಷ್ಟು? ಬದಲಾವಣೆ ಅನಿವಾರ್ಯತೆ ಇತ್ಯಾದಿ ಅಂಶಗಳ ಬಗ್ಗೆ ಪಕ್ಷದ ಚಾವಡಿಯಲ್ಲಿ ವಿಶ್ಲೇಷಣೆಗಳು ನಡೆಯುತ್ತಿವೆ. ಹಾಗೆಯೇ ಸಿಎಂ ಬದಲಾವಣೆ ಅಷ್ಟು ಸಲೀಸಲ್ಲ ಎಂಬ ವಾದ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಇದೆ. ಈಚೆಗಿನ ಉಪಚುನಾವಣೆಯಲ್ಲಿ ಬೆಳಗಾವಿಯ ಗೆಲುವನ್ನು ಬಹುತೇಕ ಇಡೀ ಬಿಜೆಪಿಯೇ ಹೀನಾಯ ಸೋಲು ಎಂದು ಒಪ್ಪಿಕೊಂಡಿದೆ. ಇನ್ನು 2023ರ ಏಪ್ರಿಲ್-ಮೇನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ.

    ಬಿಎಸ್​ವೈ ವಿರುದ್ಧ ಬಿಜೆಪಿಯೊಳಗೇ ಪ್ರತಿಪಕ್ಷ; ಸಿಎಂ ಬದಲಾವಣೆ ನೆಪದಲ್ಲಿ ಕಮಲವೇ ಖೆಡ್ಡಕ್ಕೆ, ಯಡಿಯೂರಪ್ಪ ಬೆನ್ನಿಗೆ ನಿಂತ ಡೆಲ್ಲಿ ವರಿಷ್ಠರು

    ಹಾಲಿ ಸರ್ಕಾರದ ಅವಧಿ ಮುಗಿಯಲು 23 ತಿಂಗಳಷ್ಟೇ ಇರುವಾಗ ಪ್ರಬಲ ಸಮುದಾಯದ ಪ್ರಶ್ನಾತೀತ ನಾಯಕನನ್ನು ಬದಲಿಸುವುದು ಬೇಡ ಎಂಬ ನಿಲುವಿಗೆ ಬಿಜೆಪಿ ಹೈ ಕಮಾಂಡ್ ಬಂದಿದೆ. ಆದರೆ, ಭವಿಷ್ಯದ ದೃಷ್ಟಿಯಲ್ಲಿ ಹೊಸ ನಾಯಕತ್ವಕ್ಕೆ ಪಟ್ಟ ಕಟ್ಟುವುದು, ಪಕ್ಷದ ಇಮೇಜ್ ಬದಲಿಸಿಕೊಳ್ಳಲು ಕನಿಷ್ಠ ಕಾಲಮಿತಿ ಇದೆ. ಈ ಕಾರಣಕ್ಕೆ ಬದಲಾವಣೆ ಅನಿವಾರ್ಯ ಎಂಬ ಮಾತುಗಳನ್ನು ಬಿಎಸ್​ವೈ ವಿರೋಧಿ ಬಣದ ವಾದ. ಮೂವರನ್ನು ಡಿಸಿಎಂ ಮಾಡಿ ನಾಯಕತ್ವ ಹುಡುಕಾಟಕ್ಕೆ ಸಿಕ್ಕ ಪ್ರತಿಫಲದಿಂದ ದೆಹಲಿ ವರಿಷ್ಠರು ಮತ್ತೆ ಆ ರೀತಿಯ ಸಾಹಸ ಮಾಡಬಾರದೆಂಬ ನಿಲುವಿಗೆ ಬಂದಿದ್ದಾರೆಂದು ಮೋದಿ-ಅಮಿತ್ ಷಾರ ಜತೆ ಒಡನಾಟ ಹೊಂದಿರುವ ರಾಜ್ಯಸಭಾ ಸದಸ್ಯರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

    ಜಿಂದಾಲ್ ನೆಪ: ರಾಜ್ಯದಲ್ಲಿ ಕೈಗಾರಿಕಾ ವಲಯ ವಿಸ್ತರಣೆ ನಿಟ್ಟಿನಲ್ಲಿ ಜಿಂದಾಲ್​ಗೆ ದೊಡ್ಡ ಪ್ರಮಾಣದ ಭೂಮಿ ಹಂಚಿಕೆಯಾಗಿದೆ. ಜಿಂದಾಲ್​ಗೆ ಭೂಮಿ ನೀಡಲು ವಿರೋಧಿಸಿದ್ದ ಯಡಿಯೂರಪ್ಪನವರೇ ಈಗ ಭೂಮಿ ನೀಡಿದ್ದೇಕೆ ಎಂಬುದು ಅತೃಪ್ತರ ಪ್ರಶ್ನೆ. ನ್ಯಾಯಾಲಯದಲ್ಲಿದ್ದ ಪ್ರಕರಣ ಇತ್ಯರ್ಥವಾಗಿ, ಶೇ.5ರಷ್ಟಿದ್ದ ರಾಯಲ್ಟಿಯನ್ನು ಶೇ. 50ಕ್ಕೆ ಹೆಚ್ಚಿಸಿಕೊಂಡ ನಂತರದಲ್ಲಿ ಈ ಹಿಂದಿನ ಒಡಂಬಡಿಕೆಯಂತೆ ಭೂಮಿ ಹಂಚಿಕೆ ಮಾಡಲಾಗಿದೆ ಎಂಬುದು ಸರ್ಕಾರದ ಸಮರ್ಥನೆ. ಆದರೂ ಜಿಂದಾಲ್ ನೆಪವೊಡ್ಡಿ ಅರವಿಂದ ಬೆಲ್ಲದ, ಪೂರ್ಣಿಮಾ ಸೇರಿ ಕೆಲ ಶಾಸಕರು ಪತ್ರಸಮರ ನಡೆಸುವುದರ ಜತೆಗೆ ಅದೇ ವಿಷಯವನ್ನ ನಾಯಕತ್ವ ಬದಲಾವಣೆಗೂ ಅಸ್ತ್ರ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

    ಮುಖ್ಯಮಂತ್ರಿ ಮಹಾಬಲ: ಬಿಜೆಪಿಗೆ ಪುನಃ ಅಧಿಕಾರ ತಂದುಕೊಡುವಲ್ಲಿ ಬಿ.ಎಸ್. ಯಡಿಯೂರಪ್ಪ ಪಾತ್ರ ದೊಡ್ಡದು. ಪ್ರಬಲ ಸಮುದಾಯ ಬೆನ್ನಿಗಿದೆ. ಬೆಂಬಲಿಗ ಶಾಸಕರ ಸಂಖ್ಯೆಯೇನು ಕಡಿಮೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಯಸ್ಸಿನ ಮಿತಿ ಇಲ್ಲದೆ ಅವರ ಕೆಲಸ ಮಾಡುವ ಉತ್ಸಾಹ ಕುಂದಿಲ್ಲ. ಎರಡೆರೆಡು ಬಾರಿ ಕರೊನಾ ಸೋಂಕಿತರಾದರೂ ವಿಶ್ರಾಂತಿ ಬೇಕೆಂದು ಮಲಗಿದವರಲ್ಲ. ನಿರಂತರ ಸಭೆ, ಓಡಾಟ ಬಿಟ್ಟಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಮಾಡಲೇ ಬೇಕೆಂದು ತೀರ್ಮಾನ ಮಾಡುವವರಿಗೂ ಸರಿಯಾದ ಕಾರಣ ಸಿಗುತ್ತಿಲ್ಲ.

    ಬದಲಾವಣೆಗೆ ಸತತ ಪ್ರಯತ್ನ: ದೆಹಲಿಯಲ್ಲಿ ಪದೇಪದೆ ಪ್ರಯತ್ನಗಳು ನಡೆದಿವೆ. ಹಲವು ಸಚಿವ, ಶಾಸಕರು ನಿರಂತರವಾಗಿ ಸರತಿ ಮೇಲೆ ಪಕ್ಷದ ರಾಜ್ಯ ಉಸ್ತುವಾರಿಯನ್ನು ಭೇಟಿ ಮಾಡಿ ಕಿವಿತುಂಬಿದ್ದಾರೆ. ಒಬ್ಬರೇ ಹಲವು ಬಾರಿ ಆರೋಪ ಮಾಡುವುದಕ್ಕೂ, ಹೆಚ್ಚು ಮಂದಿ ನಿರಂತರವಾಗಿ ಗಮನ ಸೆಳೆಯುವುದಕ್ಕೂ ವ್ಯತ್ಯಾಸವಿದೆ. ಜತೆಗೆ ಗ್ರಾಮೀಣಾಭಿವೃದ್ಧಿ ಸಚಿವರ ಬಹಿರಂಗ ಪತ್ರ, ಜಿಂದಾಲ್​ಗೆ ಭೂಮಿ ನೀಡಿಕೆ ವಿಷಯದಲ್ಲಿ ಸಹಿ ಸಂಗ್ರಹ ಕೂಡ ಈ ಪ್ರಯತ್ನದ ಭಾಗಗಳೇ. ಸಿಎಂ ಪುತ್ರ ವಿಜಯೇಂದ್ರ ಅವರ ಹೆಸರು ಎಳೆದು ತಂದು ದೂರು ನೀಡುವ ಪ್ರಯತ್ನಗಳು ಹೆಚ್ಚಿವೆ. ರಾಮನಗರ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಸಾಧ್ಯವಾಗದಿದ್ದರೂ ಸದಾ ದೆಹಲಿ ಮಟ್ಟದ ಮಾತನ್ನಾಡುವ ಸಚಿವ ಸಿ.ಪಿ.ಯೋಗೇಶ್ವರ್ ಕೂಡ ಬಿ-ಟೀಂ ಭಾಗವಾಗಿ ಕೆಲಸ ಮಾಡುತ್ತಿದ್ದರೂ ಅವರ್ಯಾರಿಗೂ ಈವರೆಗೆ ಹೈಕಮಾಂಡ್ ಮಣೆ ಹಾಕಿಲ್ಲ.

    15 ಶಾಸಕರ ರಾಜೀನಾಮೆ?: ನಾಯಕತ್ವ ಬದಲಾವಣೆ ವಿರೋಧಿಸುತ್ತಿರುವ ಮೋದಿ, ಷಾ ಅವರ ಗಮನ ಸೆಳೆಯಲು ರಾಜ್ಯ ಬಿಜೆಪಿಯ ಬಿ-ಟೀಮ್ ರಾಜೀನಾಮೆ ಪ್ರಹಸನವೆಂಬ ಮತ್ತೊಂದು ಕಾರ್ಯತಂತ್ರ ಹೆಣೆದಿರುವುದು ಗೊತ್ತಾಗಿದೆ. ಪಕ್ಷದಲ್ಲಿ ಹಿರಿತನ ಕಾಯ್ದುಕೊಂಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಈ ಕಾರ್ಯತಂತ್ರದ ಭಾಗವನ್ನಾಗಿ ಮಾಡಿಕೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆ. ಸ್ಪೀಕರ್ ಮೂಗಿಗೂ ಸಿಎಂ ಸ್ಥಾನದ ತುಪ್ಪ ಸವರಿರುವ ಬಿ-ಟೀಮ್ ನಾಯಕರು ಆಯ್ದ 15 ಶಾಸಕರಿಂದ ಬಿಎಸ್​ವೈ ನಾಯಕತ್ವದ ವಿರುದ್ಧ ಅಪಸ್ವರ ತೋರಿ ರಾಜೀನಾಮೆ ಕೊಡಿಸುವ ಪ್ಲಾನ್ ಮಾಡಿದ್ದಾರೆ. ಬೇರೆ ಬೇರೆ ಕೆಲಸಗಳ ಒತ್ತಡದಲ್ಲಿರುವ ದೆಹಲಿ ವರಿಷ್ಠರು ಈ ಬೆಳವಣಿಗೆಯಿಂದ ಗಲಿಬಿಲಿಗೊಂಡು ತಮ್ಮ ಮಾತು ಕೇಳುತ್ತಾರೆ. ಆ ಸಂದರ್ಭ ಸುಲಭವಾಗಿ ನಾಯಕತ್ವ ಬದಲಾವಣೆಗೆ ಒಪ್ಪಿಸಬಹುದು ಎಂಬುದು ಒಟ್ಟಾರೆ ಪ್ಲಾ್ಯನ್. ರಾಷ್ಟ್ರ ಮಟ್ಟದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳಿಂದ ಆಗಿರುವ ಡ್ಯಾಮೇಜ್​ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಹೈರಾಣಾಗಿರುವ ಸಂದರ್ಭದಲ್ಲಿ ಕರ್ನಾಟಕದ ಕಡೆ ನಿಗಾ ವಹಿಸಲು ಆಸಕ್ತಿ ಇಲ್ಲದಿದ್ದರೂ ಈ ಲಾಕ್​ಡೌನ್ ಮುಗಿಯುತ್ತಿದ್ದಂತೆಯೇ ತಮ್ಮ ಕೆಲಸ ಮಾಡಿಕೊಳ್ಳಲು ಬಿ-ಟೀಮ್ ಸಜ್ಜಾಗಿದೆ.

    ಕೋಟ್ಸ್
    ಸಿಎಂ ಸೀಟು ಖಾಲಿ ಇದ್ದಿದ್ದರೆ ಮಾತನಾಡಬಹುದಿತ್ತು. ಯಾವ ಸುದ್ದಿಯೂ ಅಧಿಕೃತವಲ್ಲ. ವರಿಷ್ಠರ ತೀರ್ವನಕ್ಕೆ ಬದ್ಧ. ಮುಂದಿನ ಚುನಾವಣೆಯನ್ನು ಯಡಿಯೂರಪ್ಪ ನೇತೃತ್ವದಲ್ಲೇ ಎದುರಿಸುತ್ತೇವೆ.

    | ಮುರುಗೇಶ್ ನಿರಾಣಿ ಗಣಿ ಸಚಿವ

    ಮುಖ್ಯಮಂತ್ರಿ ಬದಲಾವಣೆ ಚಟುವಟಿಕೆ ನಡೆಯುತ್ತಿರುವುದು ನಿಜ. ಹಲವಾರು ಸಭೆಗಳು ನಡೆಯುತ್ತಿವೆ. ಕೆಲವರು ಕೆಲವು ಕಡೆ ಪ್ರತ್ಯೇಕ ಸಭೆ ನಡೆಸುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ದೆಹಲಿಗೂ ಕೆಲವು ನಾಯಕರು ಹೋಗಿದ್ದಾರೆ. ಈ ಬೆಳವಣಿಗೆಗಳನ್ನು ನಾನು ಪಕ್ಕಕ್ಕಿಟ್ಟಿದ್ದೇನೆ. ನನ್ನ ಆದ್ಯತೆ ಎನಿದ್ದರೂ ಕರೊನಾ ನಿಯಂತ್ರಣ.

    | ಆರ್.ಅಶೋಕ್ ಕಂದಾಯ ಸಚಿವ

    ತೋಳ ಬಂತು ತೋಳ!

    ಖಚಿತ ಮಾಹಿತಿಯ ಪ್ರಕಾರ, ಕರ್ನಾಟಕ ಸರ್ಕಾರದ ಕಾರ್ಯವೈಖರಿ ಬಗ್ಗೆ ಕೇಂದ್ರಕ್ಕೆ ಅಸಮಾಧಾನವಿದೆ. ಕೆಲವು ಪ್ರಭಾವಿ ಸಚಿವರೇ ಸರಿಯಾಗಿ ಕೆಲಸ ಮಾಡದೆ ಎಲ್ಲ ವೈಫಲ್ಯವನ್ನು ಮುಖ್ಯಮಂತ್ರಿ ತಲೆಗೆ ಕಟ್ಟುತ್ತಿದ್ದಾರೆ ಎಂಬ ಮಾಹಿತಿ ವರಿಷ್ಠರಿಗೆ ಇದೆ. ಆದರೂ ಬಿ-ಟೀಮ್ ಮುಖಂಡರು ತೋಳ ಬಂತು ತೋಳ ಕತೆಯಂತೆ ಸಮಯ ಸಿಕ್ಕಾಗಲೆಲ್ಲ ದೆಹಲಿ ನಾಯಕರಿಗೆ ‘ಯಡಿಯೂರಪ್ಪ ನಾಯಕತ್ವ ಸಾಕಾಗಿದೆ, ಅವರ ಪುತ್ರ ವಿಜಯೇಂದ್ರ ಆಡಳಿತದಲ್ಲಿ ಮೂಗು ತೂರಿಸುತ್ತಾರೆಂದು’ ಮಾಹಿತಿ ನೀಡಿ ಬರುತ್ತಿದ್ದಾರೆ.

    ಅದೇ ವರದಿಯನ್ನು ಇನ್ನೊಂದಷ್ಟು ಜನರಿಂದ ಅದೇ ದೆಹಲಿ ವರಿಷ್ಠರಿಗೆ ಮುಟ್ಟಿಸುವ ಕೆಲಸವನ್ನು ಬಿಜೆಪಿಯ ಬಿ-ಟೀಮ್ ಮಾಡಿಕೊಂಡು ಬಂದಿದ್ದು, ಆರೇಳು ತಿಂಗಳಿನಿಂದ ಬಿಎಸ್​ವೈ ಹಿಡಿತ ಸಡಿಲಿಸುವ ಮತ್ತು ಅವರ ಮೇಲೆ ಶಾಸಕರು, ಮುಖಂಡರಿಗೆ ವಿಶ್ವಾಸ ಕಡಿಮೆ ಮಾಡುವ ಕೆಲಸ ಎಗ್ಗಿಲ್ಲದೆ ನಡೆದಿದೆ. ಸುಳ್ಳನ್ನೇ ಹತ್ತು ಬಾರಿ ಹೇಳಿದರೆ ಸತ್ಯವೆಂದು ಭಾಸವಾಗುವಂತೆ ಬಿಂಬಿಸುವ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕೀತೆಂಬ ನಂಬಿಕೆಯಿಂದಲೇ ಅವಿಶ್ವಾಸದ ಉಳಿಪೆಟ್ಟನ್ನು ಸ್ವಪಕ್ಷೀಯರೇ ಬಡಿಯುತ್ತಿರುವುದು ಇತ್ತ ಕಾಂಗ್ರೆಸ್ ಸಂಘಟನೆಗೂ ಪರೋಕ್ಷವಾಗಿ ನೆರವಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts