More

    ಟಿಎಚ್‌ಒ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ : ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾಗೆ ನ್ಯಾಯಾಲಯ ಕ್ಲಿನ್‌ಚಿಟ್

    ಮೈಸೂರು: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಡಾ.ಎಸ್.ಆರ್.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ನ್ಯಾಯಾಲಯ ಕ್ಲೀನ್‌ಚಿಟ್ ನೀಡಿದೆ.

    ಡಾ.ಎಸ್.ಆರ್. ನಾಗೇಂದ್ರ 20 ಆಗಸ್ಟ್ 2020 ರಂದು ಆಲನಹಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಶಾಂತ್ ಕುಮಾರ್ ಮಿಶ್ರಾ ಅವರ ಕಿರುಕುಳದಿಂದ ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪ ಪ್ರಕರಣ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಬಿ -ವರದಿ ಸಲ್ಲಿಸಿದ್ದರು.

    ಪೊಲೀಸರ ‘ಬಿ ವರದಿ’ ಪ್ರಶ್ನಿಸಿ ಡಾ. ನಾಗೇಂದ್ರ ಅವರ ಪತ್ನಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ನಗರ ಸಿವಿಲ್ ನ್ಯಾಯಾಲಯ ಪೊಲೀಸರು ಸಲ್ಲಿಸಿರುವ ‘ಬಿ ವರದಿ’ಯನ್ನು ಏ.26 ರಂದು ಎತ್ತಿ ಹಿಡಿಯುವ ಮೂಲಕ ಮಿಶ್ರಾ ಅವರಿಗೆ ಕ್ಲಿನ್‌ಚಿಟ್ ನೀಡಿದೆ.

    ಏನಿದು ಪ್ರಕರಣ?:

    ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿಗಳು ಸಾಕಷ್ಟು ಒತ್ತಡದಲ್ಲಿ ಇದ್ದರು. ಅದೇ ಸಂದರ್ಭದಲ್ಲಿ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡರು. ನಾಗೇಂದ್ರ ಆತ್ಮಹತ್ಯೆಗೆ ಪ್ರಶಾಂತ್ ಕುಮಾರ್ ಮಿಶ್ರಾ ಕಿರುಕುಳ ಕಾರಣ ಎಂದು ಆರೋಪಿಸಿ ನಾಗೇಂದ್ರ ಕುಟುಂಬದವರು ಹಾಗೂ ವೈದ್ಯ ಸಿಬ್ಬಂದಿ ಮೃತದೇಹವನ್ನು ಡಿಎಚ್‌ಒ ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು.

    ಡಾ.ನಾಗೇಂದ್ರ ಅವರ ತಂದೆ ರಾಮಕೃಷ್ಣ ನೀಡಿದ ದೂರಿನ ಮೇರೆಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಾಯಿತು. ಪ್ರಕರಣದ ನಂತರ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಸರ್ಕಾರ ವರ್ಗಾಯಿಸಿ ಅಂದಿನ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್‌ಗೆ ಹೆಚ್ಚುವರಿ ಜವಾಬ್ದಾರಿ ವಹಿಸಿತ್ತು. ಅಲ್ಲದೆ, ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಿತ್ತು.

    ಮತ್ತೊಂದೆಡೆ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ ಹೆಸರು ಹೆಸರು ಎಳೆದು ತಂದು ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಆ ಸಂದರ್ಭ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಕ್ಷೇಮಾಭಿವೃದ್ಧಿ ಸಂಘದ ಮೈಸೂರು ಜಿಲ್ಲಾ ಘಟಕ ಆಕ್ಷೇಪ ವ್ಯಕ್ತಪಡಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts