More

    ನೀರು, ಮೇವಿನ ಸಮಸ್ಯೆ ಬಗೆಹರಿಸಿ

    ಸರಗೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿಂದಾಗಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಇತರ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕ್ರಮವಹಿಸಬೇಕೆಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ತಾಕೀತು ನೀಡಿದರು.

    ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಜನ-ಜಾನುವಾರುಗಳು ಕಂಗಾಲಾಗಿವೆ. ಇದರಿಂದಾಗಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿಗೆ ಅಭಾವವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿಗೆ ಸಮಸ್ಯೆ ಉಂಟಾದರೆ ಇಲಾಖಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕುಡಿಯಲು ನೀರು ಒದಗಿಸಲು ಮುಂದಾಗಬೇಕು ಎಂದು ತಿಳಿಸಿದರು.
    ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬೋರ್‌ವೆಲ್ ಕೆಟ್ಟಿದ್ದರೆ ಅದರ ರಿಪೇರಿಗೆ ಮುಂದಾಗಬೇಕು. ಜಾನವಾರುಗಳ ಕುಡಿಯುವ ನೀರಿನ ತೊಟ್ಟಿ ತೊಳೆಯದಿದ್ದರೆ ಅದನ್ನು ಕೂಡಲೇ ಸ್ವಚ್ಛಗೊಳಿಸಬೇಕು. ರೋಗ ನಿವಾರಣೆಗೆ ಕ್ರಮವಹಿಸಬೇಕು. ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ವಿತರಿಸಬೇಕು. ಅದೇ ರೀತಿಯಲ್ಲಿ ರಸಗೊಬ್ಬರ, ಔಷಧಗಳ ವಿತರಣೆಗೆ ಮುಂದಾಗಬೇಕು ಎಂದು ಅಧಿಕಾರಿಗಳು ಸೂಚಿಸಿದರು.

    ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಕ್ಲೀನ್ ಮಾಡಬೇಕು. ಪಶು ಇಲಾಖೆಯಿಂದ ದನಗಳ ಮೇವಿಗಾಗಿ ಮೇವು ಜೋಳವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದು, ರೈತರು ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಎಫ್‌ಐಡಿ ನಂಬರ್ ನೀಡಿ ಉಚಿತವಾಗಿ ಪಡೆಯಬಹುದು. ಕೇರಳ ಮೂಲದ ವ್ಯಕ್ತಿಗಳಿಗೆ ಮುಸುಕಿನ ಜೋಳದ ಕಡ್ಡಿಗಳನ್ನು ಮಾರಾಟ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು, ಇದಕ್ಕೆ ಸಂಬಂಧಪಟ್ಟಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

    ಸಭೆಯಲ್ಲಿ ಇಒ ಕೆ.ಸುಷ್ಮಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಮಂಜುನಾಥ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ವೈ.ಡಿ.ರಾಜಣ್ಣ, ಇಂಜಿನಿಯರ್‌ಗಳಾದ ಉಷಾ, ಗೋವಿಂದರಾಜ್, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಮಹದೇವನಾಯಕ, ಸರಗೂರು ತಾಲೂಕು ಚನ್ನನಾಯಕ, ಗೌರವಾಧ್ಯಕ್ಷ ಶಿವಕುಮಾರ್ ಆರಾಧ್ಯ, ಉಪಾಧ್ಯಕ್ಷ ಹಳೆಯೂರು ಗಣೇಶ್, ಪ್ರಧಾನ ಕಾರ್ಯದರ್ಶಿ ಮಹಾಲಿಂಗು, ಚಿಕ್ಕಬರಗಿ ನಂಜಸ್ವಾಮಿ, ಗೋವಿಂದರಾಜು, ಬಿದರಹಳ್ಳಿ ಲಿಂಗನಾಯಕ, ಬಡಗಲಪುರ ಕುಮಾರ್, ಗೋವಿಂದನಾಯಕ, ಶಿವಲಿಂಗಪ್ಪ, ರೈತ ಮುಖಂಡರು, ಇಲಾಖಾಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts