

ರಾಮನಗರ: ಕಳೆದ ವಾರ ಚಿರತೆ ದಾಳಿಯಿಂದ ಮೃತಪಟ್ಟಿದ್ದ ಕೊತ್ತಗಾನಹಳ್ಳಿಯ ಗಂಗಮ್ಮ ಅವರ ಮನೆಗೆ
ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರು ಭೇಟಿ ನೀಡಿ, ಏಳೂವರೆ ಲಕ್ಷ ರೂಪಾಯಿಗಳ ಪರಿಹಾರ ಮಂಜೂರಾತಿ ಪತ್ರವನ್ನು ನೀಡಿದರು.
ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಕೊತ್ತಗಾನಹಳ್ಳಿಯ 62 ವರ್ಷದ ಮಹಿಳೆ ಚಿರತೆ ದಾಳಿಯಲ್ಲಿ ಮೃತಪಟ್ಟವರು. ಸೆಖೆಯ ನಿಮಿತ್ತ ಪಡಸಾಲೆಯಲ್ಲಿ ಮಹಿಳೆ ಮಲಗಿದ್ದಾಗ ಈ ಘಟನೆ ನಡೆದಿದೆ. ಘಟನೆ ನಡೆದ ತಕ್ಷಣ, ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿಗಳು, ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆಯೇ ಇದೀಗ ಪರಿಹಾರ ಮಂಜೂರಾತಿ ಪತ್ರ ಅನ್ನು ಉಪ ಮುಖ್ಯಮಂತ್ರಿಗಳು ನೀಡಿದರು.
ಮಂಜೂರಾತಿ ಪತ್ರವನ್ನು ಮೃತರಾದ ಗಂಗಮ್ಮ ಅವರ ಸೊಸೆ ಲಕ್ಷಮ್ಮ ಹಾಗೂ ಮಮ್ಮಗ ರವಿಶಂಕರ್ ಅವರಿಗೆ ಹಸ್ತಾಂತರಿಸಿದ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಚಿರತೆ ದಾಳಿ ನಡೆಸಿದ ಸ್ಥಳವನ್ನು ಪರಿಶೀಲನೆ ಮಾಡಿದ ಉಪಮುಖ್ಯಮಂತ್ರಿ, ' ಚಿರತೆಗಳು ಮನುಷ್ಯನ ಮೇಲೆ ದಾಳಿ ನಡೆಸುವುದು ಅಪರೂಪ. ಇದು ವಿಶೇಷ ಪ್ರಕರಣವಾಗಿದೆ. ದಾಳಿ ನಡೆಸಿದ ಚಿರತೆಯನ್ನು ಸೆರೆ ಹಿಡಿಯುವುದು ಅತ್ಯವಶ್ಯಕವಾಗಿದೆ. ಇಲ್ಲದಿದ್ದರೆ ಮುಂದೆ ಇದೇ ರೀತಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ' ಎಂದು ಸ್ಥಳದಲ್ಲಿ ಉಪಸ್ಥಿತರಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ಇದನ್ನೂ ಓದಿ: ಮಂಡ್ಯ ಎಸ್ಪಿಗೂ ಕರೊನಾತಂಕ!
ಇದೆ ವೇಳೆ, ಅರಣ್ಯ ಇಲಾಖೆ ವತಿಯಿಂದ ಚಿರತೆ ಸೆರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿ.ಸಿ.ಎಫ್ ಎಸ್.ಎನ್.ಹೆಗ್ಡೆ, ಎ.ಸಿ.ಎಫ್ ರಾಮಕೃಷ್ಣಪ್ಪ, ವನ್ಯ ಜೀವಿ ತಜ್ಞ ಸಂಜಯ್ ಗುಬಿ ಅವರಿಂದ ಮಾಹಿತಿಯನ್ನು ಅಶ್ವತ್ಥನಾರಾಯಣ ಪಡೆದರು.
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕ್ರಂ ಅವರು ಉಪಸ್ಥಿತರಿದ್ದರು.