

ಬೆಂಗಳೂರು: ಓರಿಯೋ ಬಿಸ್ಕತ್ ಕಂಪನಿಯಿಂದ ಮಕ್ಕಳಿಗೆ ಕಮಷಿರ್ಯಲ್ ಸ್ಟಾರ್ ಆಡಿಷನ್ ನಡೆಸುವುದಾಗಿ ನಂಬಿಸಿ ಬರೋಬ್ಬರಿ 16.69 ಲಕ್ಷ ರೂ. ಪಡೆದು ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ವೈಟ್ಫೀಲ್ಡ್ನ ಅಮಿತ್ ತಲ್ವರ್ (44) ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಜನೀಸ್ ಮತ್ತು ರಿಶಿ ಕಪೂರ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ವೈಟ್ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಮಿತ್ ಅವರನ್ನು ಸಂಪರ್ಕ ಮಾಡಿದ ಆರೋಪಿಗಳು, ಡಾ.ರಿಶಿ ಕಪೂರ್ ಅಲಿಯಸ್ ಅರ್ಪೂವ ಅಶ್ವಿನಿ ಎಂಬ ಏಜೆನ್ಸಿಯ ಪ್ರತಿನಿಧಿಗಳೆಂದು ಪರಿಚಯ ಮಾಡಿಕೊಂಡಿದ್ದಾರೆ. ನಿಮ್ಮ ಮಕ್ಕಳಿಗೆ ಓರಿಯೋ ಬಿಸ್ಕತ್ ಕಂಪನಿ ಕಡೆಯಿಂದ ಕಮಷಿರ್ಯಲ್ ಸ್ಟಾರ್ ಎಂಬ ಆಡಿಷನ್ ಆಯೋಜನೆ ಮಾಡಲಾಗುತ್ತಿದೆ. ವಿಜೇತ ಮಕ್ಕಳಿಗೆ ಆಕರ್ಷಕ ಬಹುಮಾನ ಲಭಿಸಲಿದೆ ಎಂದು ಹೇಳಿದ್ದರು.
ಆಸೆಗೆ ಬಿದ್ದ ಅಮಿತ್, ಒಪ್ಪಿಕೊಂಡಾಗ ಆರೋಪಿಗಳು ವಾಟ್ಸ್ಆ್ಯಪ್ನಲ್ಲಿ ಲಿಂಕ್ ಕಳುಹಿಸಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಪಾಲಕರು ಮಗು ಫೋಟೋ, ವಿಡಿಯೋ ಅಪ್ಲೋಡ್ ಮಾಡಿದ್ದರು. ಸ್ವಲ್ಪ ದಿನ ಬಿಟ್ಟು ಅಮಿತ್ಗೆ ಕರೆ ಮಾಡಿದ ಆರೋಪಿಗಳು ನಿಮ್ಮ ಮಗು ಆಯ್ಕೆಯಾಗಿದೆ ಎಂದು ಹೇಳಿ ಮುಂದಿನ ಹಂತಕ್ಕೆ ಹೋಗಲು ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿ ನೋಂದಣಿ ಮಾಡಿಕೊಳ್ಳುವಂತೆ ಹೇಳಿದ್ದರು. ಮಗುವಿನ ನೃತ್ಯದ ವಿಡಿಯೋ ಮಾಡಿದ ಅಮಿತ್, ಆರೋಪಿಗಳು ನೀಡಿದ್ದ ಲಿಂಕ್ ಬಳಸಿ ವೆಬ್ಸೈಟ್ ತೆರೆದು ವಿಡಿಯೋ ಅಪ್ಲೋಡ್ ಮಾಡಿದ್ದರು. ಈ ಬಾರಿ ಶುಲ್ಕವೆಂದು 1.34 ಲಕ್ಷ ರೂ. ಪಾವತಿ ಮಾಡಬೇಕೆಂದು ಹಣ ವಸೂಲಿ ಮಾಡಿದ್ದರು. ಇದಾದ ಮೇಲೆ 3ನೇ ಹಂತಕ್ಕೆ ಮಗು ಆಯ್ಕೆಯಾಗಿದೆ. ಈ ಬಾರಿ ಫೋಟೋ ಶೂಟ್, ವಸ್ತ್ರವಿನ್ಯಾಸ ಇನ್ನಿತ್ತರ ವಸ್ತುಗಳನ್ನು ಖರೀದಿ ಮಾಡಬೇಕು. ಅದಕ್ಕಾಗಿ ಹಣ ಪಾವತಿ ಮಾಡಿ ನೋಂದಣಿ ಮಾಡಿಕೊಂಡರೆ ದಿನಾಂಕ ನಿಗದಿ ಮಾಡುವುದಾಗಿ ಹೇಳಿ ಮತ್ತೆ ಲಕ್ಷಾಂತರ ರೂ. ವಸೂಲಿ ಮಾಡಿದ್ದರು. ಇದೇ ರೀತಿ ನಾನಾ ನೆಪವೊಡ್ಡಿ ಒಟ್ಟಾರೆ 16.69 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಕೊನೆಗೊಂದು ದಿನ ಅಮಿತ್ಗೆ ಅನುಮಾನ ಬಂದು ಆರೋಪಿಗಳ ಕಂಪನಿ ಬಗ್ಗೆ ವಿಚಾರಿಸಿದಾಗ ಇದೊಂದು ವಂಚನೆ ಎಂಬುದು ಗೊತ್ತಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.