

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವರ ಹೂವಿನ ತೇರಿನ ಉತ್ಸವ ನೆರವೇರಲಿದೆ.
ದೇವರ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಹಾಗೂ ಪಾಲಕಿ ಉತ್ಸವ ನೆರವೇರಲಿದೆ. ಬಳಿಕ ಉತ್ತರಾದಿ ಮಠದಲ್ಲಿ ಮಯೂರ ವಾಹನ ಸುಬ್ರಹ್ಮಣ್ಯ ದೇವರಿಗೆ ಪೂಜೆ ನಡೆಯಲಿದೆ. ನಂತರ ಹೂವಿನ ತೇರಿನಲ್ಲಿ ಸುಬ್ರಹ್ಮಣ್ಯ ದೇವರು ಸಹೋದರ ಕಾಶಿಕಟ್ಟೆ ಮಹಾಗಣಪತಿಯ ಸನ್ನಿಧಿಗೆ ಆಗಮಿಸಿ ಸೋದರರ ಸಮಾಗಮ ನೆರವೇರಲಿದೆ. ಈ ಸಂದರ್ಭ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ಹೂ ಮತ್ತು ಹಣತೆಗಳ ಶೃಂಗಾರದ ನಡುವೆ ಮಹಾಗಣಪತಿಗೆ ರಂಗಪೂಜೆ ನಡೆಯಲಿದೆ. ಬಳಿಕ ವಾಸುಕಿ ಕಟ್ಟೆಯಲಿ,್ಲ ಶಿವರಾತ್ರಿ ಕಟ್ಟೆಯಲ್ಲಿ ಮತ್ತು ಸವಾರಿ ಮಂಟಪದ ಸವಾರಿ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಲಿದೆ. ಮೂರು ದಿನಗಳ ಕಾಲ ಎಡೆಸ್ನಾನ ನಡೆಯಲಿದೆ.
ಮಯೂರವಾಹನೋತ್ಸವ: ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಶ್ರೀ ದೇವರ ಶೇಷವಾಹನೋತ್ಸವ ನೆರವೇರಿತು. ಮಹಾಪೂಜೆಯ ನಂತರ ದೇವರ ಹೊರಾಂಗಣ ಉತ್ಸವಗಳು ಆರಂಭವಾಯಿತು. ಶೇಷವಾಹನಯುಕ್ತ ಬಂಡಿ ಉತ್ಸವ ನೆರವೇರಿದ್ದು ಬಳಿಕ ವಿವಿಧ ಪುಷ್ಪಗಳಿಂದ ತುಂಬಿದ್ದ ಸಾಲಂಕೃತ ಪಾಲಕಿಯಲ್ಲಿ ದೇವರ ಪಾಲಕಿ ಉತ್ಸವ ನೆರವೇರಿತು. ಬಳಿಕ ಪಂಚ ಶಿಖರಗಳನ್ನು ಒಳಗೊಂಡ ಚಂದ್ರ ಮಂಡಲ ರಥದಲ್ಲಿ ಶ್ರೀ ದೇವರ ಶೇಷ ವಾಹನೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ನಂತರ ಸವಾರಿ ಮಂಟಪದಲ್ಲಿರುವ ಅವಲಕ್ಕಿ ಕಟ್ಟೆಯಲ್ಲಿ ಶ್ರೀ ದೇವರ ಕಟ್ಟೆಪೂಜೆ ನಡೆಯಿತು.