

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಬಳಿ ಚಾಮರಾಜನಗರ ಬಿಇಒ ಜೀಪ್ ಪಲ್ಟಿಯಾಗಿ ಚಾಲಕನಿಗೆ ಗಾಯವಾಗಿದ್ದು, ಬೆಟ್ಟದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಲಿದ್ದು, ಪೊಲೀಸರನ್ನು ಸಿಎಂ ಕಾರ್ಯಕ್ರಮದ ಬಂದೋಬಸ್ತ್ಗೆ ಕರೆದೊಯ್ಯುವಾಗ ಅವಗಢ ಸಂಭವಿಸಿದೆ. ಚಾಮರಾಜನಗರ ಬಿಇಒ ಕಚೇರಿಯ ಬೊಲೆರೊ ಕಾರಿನ ಚಾಲಕ ಗುರುಕಿರಣ್ಗೆ ಸಣ್ಣ ಪುಟ್ಟಗಾಯಗಳಾಗಿವೆ. ಉಳಿದವರಿಗೆ ತೊಂದರೆ ಆಗಿಲ್ಲ.
ತಾಳುಬೆಟ್ಟದ ಮಾರ್ಗದಲ್ಲಿರುವ ಆನೆ ತಲೆದಿಂಬದ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಗಾಯಾಳು ಗುರುಕಿರಣ್ಗೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಇನ್ನು ಸಿಎಂ ಆದ ಬಳಿಕ ಮೊದಲ ಬಾರಿಗೆ ಬಿಎಸ್ವೈ ಮಾದಪ್ಪನ ದರ್ಶನ ಪಡೆಯುತ್ತಿದ್ದಾರೆ. ಎರಡು ದಿನಗಳ ಕಾಲ ಪ್ರವಾಸ ಕೈ ಗೊಂಡಿದ್ದು, ಇಂದು ಸಂಜೆ 5 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮಾದಪ್ಪನ ಬೆಟ್ಟಕ್ಕೆ ಆಗಮಿಸಲಿದ್ದಾರೆ. ಬಳಿಕ 5.30ಕ್ಕೆ ಅಧಿಕಾರಿಗಳೊಂದಿಗೆ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ.
ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿಎಂ, ಇಂದು ಮಾದಪ್ಪನ ಬೆಟ್ಟದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೇರವೇರಿಸಲಿದ್ದಾರೆ.
ಸಿಎಂ ಬಿಎಸ್ವೈಗೆ ಡಿಸಿಎಂ ಗೋವಿಂದ ಕಾರಜೋಳ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸೇರಿದಂತೆ ಸ್ಥಳೀಯ ಶಾಸಕರು ಸಾಥ್ ನೀಡಲಿದ್ದಾರೆ.