

ಹನೂರು: ಗ್ರಾಮ ಪಂಚಾಯಿತಿಗೆ ಬಿಡುಗಡೆಯಾಗುವ 16ನೇ ಹಣಕಾಸು ಯೋಜನೆಯ ಅನುದಾನವನ್ನು ಕಡ್ಡಾಯವಾಗಿ ತುರ್ತು ಕುಡಿಯುವ ನೀರಿಗೆ ಮೀಸಲಿಡುವಂತೆ ಜಿ.ಪಂ. ಉಪ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಶ್ರುತಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ತಾಲೂಕಿನಲ್ಲಿ ಪ್ರಸ್ತುತ ಮಳೆಯಾಗಿದ್ದು, ಅಂತರ್ಜಲ ಮಟ್ಟ ಸುಧಾರಣೆಯತ್ತ ಸಾಗಿದೆ. ಆದರೂ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಗ್ರಾ.ಪಂ.ವಾರು ಯೋಜನೆಯೊಂದನ್ನು ರೂಪಿಸಿ ತಾ.ಪಂ. ಇಒ ಅವರಿಗೆ ಸಲ್ಲಿಸಬೇಕು. ಕೆಲವು ಕಡೆಗಳಲ್ಲಿ ಕೊರೆಸಲಾಗಿರುವ ಬೋರ್‌ಗಳಿಗೆ ಮೋಟಾರ್ ಸೌಕರ್ಯ ಕಲ್ಪಿಸಿಲ್ಲ. ಈ ಬಗ್ಗೆ ಅಗತ್ಯ ಕ್ರಮವಾಗಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷೃ ಸಲ್ಲದು. ಜೆಜೆಎಂ ಯೋಜನೆಯಡಿ ನಿರ್ಮಿಸಿರುವ ಓವರ್‌ಹೆಡ್ ಟ್ಯಾಂಕ್ ಪ್ರಗತಿಯ ಸ್ಥಿತಿಯ ಬಗ್ಗೆ ವರದಿ ಸಲ್ಲಿಸಬೇಕು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಧನ್ವನಾಗ್ ಅವರಿಗೆ ಸೂಚಿಸಿದರು. ಇನ್ನು 16ನೇ ಹಣಕಾಸು ಯೋಜನೆಯ ಅನುದಾನವನ್ನು ಚರಂಡಿ, ಸಿಸಿ ರಸ್ತೆ ನಿರ್ಮಾಣ, ಸ್ವಚ್ಛತೆ ಹಾಗೂ ಇನ್ನಿತರ ಕಾರ್ಯಕ್ಕೆ ಬಳಸದೇ ತುರ್ತು ಕುಡಿಯುವ ನೀರಿಗೆ ಮೀಸಲಿಡಬೇಕು. ಈ ಬಗ್ಗೆ ಪ್ರತಿಯೊಬ್ಬರೂ ಅಗತ್ಯ ಕ್ರಮವಹಿಸಬೇಕು ಎಂದು ಪಿಡಿಒಗಳಿಗೆ ತಿಳಿಸಿದರು.
ಮೇವು ಕಿಟ್ ವಿತರಣೆಗೆ ಕ್ರಮವಹಿಸಿ:
ಪಶುಪಾಲನಾ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ಎಸ್. ಶಿವರಾಜು ಮಾತನಾಡಿ, ತಾಲೂಕಿನಲ್ಲಿ 63 ಹಸು, ಎಮ್ಮೆಗಳು ಹಾಗೂ 70 ಸಾವಿರ ಮೇಕೆಗಳಿವೆ. ಮೇವಿನ ಸಮಸ್ಯೆ ತಲೆದೋರಿರುವುದರಿಂದ ಈಗಾಗಲೇ ರೈತರಿಗೆ ಮೇವು ಕಿಟ್ ವಿತರಿಸಲಾಗಿದೆ. ಆದರೂ ಬೇಡಿಕೆ ಇದೆ ಎಂದು ತಿಳಿಸಿದರು. ಇದಕ್ಕೆ ಆಡಳಿತಾಧಿಕಾರಿ ಅವರು ಪ್ರತಿಕ್ರಿಯಿಸಿ, ಗೋ ಶಾಲೆ ತೆರೆಯುವ ಸಂಬಂಧ ಸ್ಥಳ ಗುರುತಿಸಿ, ಜಾನುವಾರುಗಳಿಗೆ ರೋಗಭಾದೆ ತಗುಲದಂತೆ ಲಸಿಕೆ ನೀಡಿ ಹಾಗೂ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಮೇವು ಕಿಟ್ ವಿತರಣೆಗೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮೂಲ ಸೌಕರ್ಯ ಸಂಬಂಧ ಕೈಗೊಳ್ಳುವ ಕಾಮಗಾರಿಯ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆಯ ರೇಚಣ್ಣ ಅವರಿಗೆ ಸೂಚಿಸಿದರು.
ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ಸಮಾಜ ಕಲ್ಯಾಣ, ಸೆಸ್ಕ್ ಹಾಗೂ ಇನ್ನಿತರೆ ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳಿಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿಲಾಯಿತು.
ತಾಪಂ ಇಒ ಉಮೇಶ್, ಸಹಾಯಕ ನಿರ್ದೇಶಕ ರವೀಂದ್ರ, ಬಿಇಒ ಪ್ರತಿಭಾ, ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ, ಪಿಡಿಒಗಳು ಹಾಗೂ ಇನ್ನಿತರರಿದ್ದರು.