ಯಳಂದೂರು ತಾಲೂಕು ಅಗರ-ಮಾಂಬಳ್ಳಿ ಗ್ರಾಮದಲ್ಲಿ ನಡೆಯಲಿರುವ ನವ ಚಂಡಿಕಾ ಯಾಗದ ಪೂರ್ವಭಾವಿ ಸಭೆಯಲ್ಲಿ ನಾಡಗೌಡರಾದ ಪುಟ್ಟಸುಬ್ಬಣ್ಣ ಮಾತನಾಡಿದರು. ಮಾಂಬಳ್ಳಿ ನಂಜುಂಡಸ್ವಾಮಿ, ವೆಂಕಟೇಶ್ ಇದ್ದರು.
ಯಳಂದೂರು: ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದ ಹಿಂಡಿ ಮಾರಮ್ಮ ದೇಗುಲದಲ್ಲಿ ಚಂಡಿಕಾ ಪಾರಾಯಣ ಹಾಗೂ ನವ ಚಂಡಿಕಾ ಹೋಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನಾಡಗೌಡರಾದ ಸುಬ್ಬಣ್ಣ ತಿಳಿಸಿದರು.
ದೇಗುಲದ ಆವರಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಏಳು ಗ್ರಾಮಗಳಿಗೆ ಸೇರಿದ ದೇಗುಲ ಇದಾಗಿದೆ. ಫೆ. 9 ಹಾಗೂ 10ರಂದು ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ದೇವಿಗೆ ರಾಜ್ಯ ಸೇರಿದಂತೆ ತಮಿಳುನಾಡು, ಕೇರಳದಲ್ಲೂ ಭಕ್ತರಿದ್ದಾರೆ. ಪ್ರತಿ ವರ್ಷ ದೀಪಾವಳಿಯಲ್ಲಿ ಜಾತ್ರೆ, ಕೊಂಡೋತ್ಸವ ನಡೆಯಲಿದೆ. ಈ ಬಾರಿ ಚಂಡಿಕಾ ಹೋಮವನ್ನು ಮಾಡಲಾಗುತ್ತಿದೆ. ಹಾಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ದೇಗುಲ ಸಮಿತಿಯ ಮಾಂಬಳ್ಳಿ ನಂಜುಂಡಸ್ವಾಮಿ ಮಾತನಾಡಿ, 9ರಂದು ಸಂಜೆ 7 ಗಂಟೆಗೆ ಚಂಡಿಕಾ ಪಾರಾಯಣ ನಡೆಯಲಿದೆ. 10ರಂದು ನವ ಚಂಡಿಕಾ ಹೋಮ ನಡೆಯಲಿದೆ. ಇದರ ಉಸ್ತುವಾರಿಯನ್ನು ಈ ಬಾರಿ ಶಾಂತಮ್ಮ ಹಾಗೂ ಸಿದ್ಧಲಿಂಗಯ್ಯ ದಂಪತಿ ವಹಿಸಿಕೊಂಡಿದ್ದಾರೆ. 10ರಂದು ಮಧ್ಯಾಹ್ನ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದರು.
ನಾಡಗೌಡರಾದ ರಮೇಶ್, ರವಿ, ಮಹದೇವಸ್ವಾಮಿ ನಾರಾಯಣಸ್ವಾಮಿ, ಬಸವರಾಜು, ಪುಟ್ಟಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಗ್ರಾಮಸ್ಥರು ಹಾಜರಿದ್ದರು.