ಹುಲಿ, ಚಿರತೆ ಸಂಚಾರ, ರೈತರ ಆತಂಕ

ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡಿರುವ ಚಿರತೆ
ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡಿರುವ ಚಿರತೆ
Published on
ಯಳಂದೂರು: ತಾಲೂಕಿನ ಯರಗಂಬಳ್ಳಿ ಗ್ರಾಮದ ಉಳುಗೆರೆ ಬಳಿ ಹುಲಿ ಹಾಗೂ ಚಿರತೆ ಕಾಣಿಸಿಕೊಂಡಿದ್ದು ಈ ಭಾಗದ ರೈತರು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಇಲ್ಲಿನ ಜಮೀನುಗಳು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಗೆ ಹೊಂದಿಕೊಂಡಂತಿವೆ. ನಾಲ್ಕೈದು ದಿನಗಳಿಂದ ಇಲ್ಲಿನ ಊಳುಗೆರೆ ಸಮೀಪ ಚಿರತೆ ಓಡಾಡುವ ದೃಶ್ಯವನ್ನು ಮೊಬೈಲ್‌ನಲ್ಲಿ ಕೆಲ ರೈತರು ಸೆರೆ ಹಿಡಿದ್ದಾರೆ. ಇದರೊಂದಿಗೆ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ರಾತ್ರಿ ವೇಳೆ ಜಮೀನಿಗೆ ಬೆಳೆ ಕಾಯಲು, ನೀರುಣಿಸಲು ಹೋಗುವ ರೈತರು ಭಯಗೊಂಡಿದ್ದಾರೆ.
ಇತ್ತೀಚೆಗೆ ಯರಗಂಬಳ್ಳಿ ಸಮೀಪದ ಗಂಗವಾಡಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ನಾಲ್ಕು ಹಸುಗಳನ್ನು ಕೊಂದು ಹಾಕಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಹುಲಿ, ಚಿರತೆ ಸಂಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಲು ಮುಂದಾಗಬೇಕು ಎಂದು ರೈತರಾದ ಸಿದ್ದರಾಜು, ನಾರಾಯಣ, ಲೋಕೇಶ್ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ.
"

ಯರಗಂಬಳ್ಳಿ ಗ್ರಾಮದ ಸುತ್ತ ಚಿರತೆ ಹಾಗೂ ಹುಲಿ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದೆ. ಈಗಾಗಲೇ ನಮ್ಮ ಸಿಬ್ಬಂದಿ ಸ್ಥಳದಲ್ಲಿ ಬೋನು ಇರಿಸಿದ್ದಾರೆ. ರಾತ್ರಿ ವೇಳೆ ಗಸ್ತು ಹೆಚ್ಚು ಮಾಡಲಾಗಿದೆ. ಶೀಘ್ರ ಸೆರೆ ಹಿಡಿಯಲು ಮುಂದಾಗುತ್ತೇವೆ. ಸತೀಶ್, ಆರ್‌ಎಫ್‌ಒ, ಯಳಂದೂರು ವಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net