ಚೆಕ್ ಡ್ಯಾಂ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸಿ

ಶಾಸಕ ಎಂ.ಆರ್.ಮಂಜುನಾಥ್ ಮಾರ್ಟಳ್ಳಿ ಭಾಗಕ್ಕೆ ಭೇಟಿ ನೀಡಿ ಚೆಕ್ ಡ್ಯಾಂ ನಿರ್ಮಾಣ ಸಂಬಂಧ ಪರಿಶೀಲನೆ ನಡೆಸಿದರು. ರಾಮಕೃಷ್ಣ, ರವೀಂದ್ರ, ಮಂಜೇಶ್, ಜೋಸೆಫ್ ಇತರರಿದ್ದರು.
ಶಾಸಕ ಎಂ.ಆರ್.ಮಂಜುನಾಥ್ ಮಾರ್ಟಳ್ಳಿ ಭಾಗಕ್ಕೆ ಭೇಟಿ ನೀಡಿ ಚೆಕ್ ಡ್ಯಾಂ ನಿರ್ಮಾಣ ಸಂಬಂಧ ಪರಿಶೀಲನೆ ನಡೆಸಿದರು. ರಾಮಕೃಷ್ಣ, ರವೀಂದ್ರ, ಮಂಜೇಶ್, ಜೋಸೆಫ್ ಇತರರಿದ್ದರು.
Published on
ಹನೂರು: ನೀರು ಸಂಗ್ರಹಣಾ ಮೂಲಗಳಾದ ಕೆರೆ ಹಾಗೂ ಚೆಕ್ ಡ್ಯಾಂಗಳ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸುವಂತೆ ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.
ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆಯಲ್ಲಿನ ಕೆರೆ ಹಾಗೂ ಚೆಕ್ ಡ್ಯಾಂ ಸ್ಥಳಕ್ಕೆ ಭಾನುವಾರ ಸಂಜೆ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ತೆರಳಿ ಪರಿಶೀಲಿಸಿ ಮಾತನಾಡಿದರು. ಈ ಭಾಗದಲ್ಲಿ ಮಳೆಯಾದ ವೇಳೆ ಹಳ್ಳಗಳಲ್ಲಿ ಯಥೇಚ್ಛವಾಗಿ ನೀರು ಹರಿಯುತ್ತದೆ. ಆದರೆ, ಸಮರ್ಪಕ ಚೆಕ್‌ಡ್ಯಾಂ ಇಲ್ಲದ ಪರಿಣಾಮ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ಪ್ರಯೋಜನಕ್ಕೆ ಬಾರದಂತಾಗಿದೆ. ಆದ್ದರಿಂದ ಈ ಭಾಗದಲ್ಲಿ ಸರ್ವೇ ನಡೆಸಿ ಗ್ರಾಮಸ್ಥರ ಸಹಕಾರ ಹಾಗೂ ಸಲಹೆ ಪಡೆದು ಅಗತ್ಯವಿರುವೆಡೆ ಚೆಕ್ ಡ್ಯಾಂ ನಿರ್ಮಿಸಲು ಕ್ರಮವಹಿಸಬೇಕು. ಜತೆಗೆ ಇರುವ ಚೆಕ್ ಡ್ಯಾಂಗಳ ಮಟ್ಟವನ್ನು ಹೆಚ್ಚಿಸಬೇಕು. ಕೆರೆಗಳಲ್ಲಿ ಹೂಳು ತೆಗೆಸಿ ಅಭಿವೃದ್ಧಿಪಡಿಸಬೇಕು. ಇದರಿಂದ ಮಳೆಗಾಲದಲ್ಲಿ ನೀರು ಸಂಗ್ರಹಕ್ಕೆ ಸಹಕಾರಿಯಾಗಲಿದೆ. ಅಂತರ್ಜಲ ಮಟ್ಟ ಸುಧಾರಣೆಯಾಗಲಿದ್ದು, ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಬಳಿಕ ಹಾಲೇರಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು ನೀರು ಸಂಗ್ರಹಣಕ್ಕೆ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು. ಕೋಟೆ ಪೊದೆ, ತಾಂಡಮೇಡು, ಹುಚ್ಚಪ್ಪನ ದೊಡ್ಡಿ ಹಾಗೂ ಈ ಭಾಗದ ಇನ್ನಿತರ ಕಡೆಗಳಿಗೆ ತೆರಳಿ ಚೆಕ್ ಡ್ಯಾಂ ನಿರ್ಮಾಣ ಸಂಬಂಧ ಪರಿಶೀಲಿಸಿದರು.
ಕಾವೇರಿ ನೀರಾವರಿ ನಿಗಮದ ಎಇಇ ರಾಮಕೃಷ್ಣ, ತಾಪಂ ಸಹಾಯಕ ನಿರ್ದೇಶಕ ರವೀಂದ್ರ, ಪಿಡಿಒ ಚನ್ನೇಶ್, ಮುಖಂಡರಾದ ಮಂಜೇಶ್, ಮಣಿ, ಜಸ್ಸಿಂಪಾಷ, ಶ್ರೀನಿವಾಸ್, ಜಪಮಾಲೆ, ಮಾದಯ್ಯ, ಗಣೇಶ್, ಜೋಸೆಫ್, ಡಿ.ಕೆ.ರಾಜು, ತಿರುಪತಿ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net