ಗುಂಡ್ಲುಪೇಟೆ ತಾಲೂಕಿನ ಬಲಚವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೊನ್ನೂರು ಪ್ರಕಾಶ್ ಮಾತನಾಡಿದರು. ರಾಜೇಂದ್ರ ಸ್ವಾಮೀಜಿ, ಷಣ್ಮುಖ ಸ್ವಾಮಿ, ನಾಗಪ್ಪ, ಗೌಡಿಕೆ ಚಿಕ್ಕಮಾದಪ್ಪ ಇದ್ದರು.
ಗುಂಡ್ಲುಪೇಟೆ: ಜನರ ಹಾಗೂ ರೈತ ಸಂಕುಲದ ಉಳಿವಿಗಾಗಿ ರೈತರು ರಾಸಾಯನಿಕ ಬಳಕೆ ಕೈಬಿಟ್ಟು ಸಾವಯವಕ್ಕೆ ಪರಿವರ್ತನೆಯಾಗಬೇಕಿದೆ ಎಂದು ಸಾಮೂಹಿಕ ನಾಯಕತ್ವ ರೈತ ಸಂಘಟನೆಯ ಮುಖಂಡ ಹೊನ್ನೂರು ಪ್ರಕಾಶ್ ಹೇಳಿದರು.
ತಾಲೂಕಿನ ಬಲಚವಾಡಿ ಗ್ರಾಮದಲ್ಲಿ ಸುಮಾರು 135 ಯುವಕರನ್ನು ಒಳಗೊಂಡ ರೈತಸಂಘದ ನೂತನ ಗ್ರಾಮಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅಧಿಕ ಉತ್ಪಾದನೆ ಮಾಡುವ ಸಲುವಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸಲಾಗುತ್ತಿದೆ. ಇಂತಹ ಆಹಾರ, ತರಕಾರಿ, ಸಕ್ಕರೆ, ಎಚ್.ಎಫ್.ತಳಿಯ ಹಸುವಿನ ಹಾಲು ಉಪಯೋಗಿಸಿದವರಿಗೆ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳು ಬರುತ್ತವೆ ಎಂಬ ಅರಿವಿದ್ದರೂ ಎಲ್ಲರಿಗೂ ಇದನ್ನೇ ತಿನ್ನಿಸಲಾಗುತ್ತಿದೆ ಎಂದು ಹೇಳಿದರು.
ಒಂದೆಡೆ ಸರ್ಕಾರಗಳು ರೈತರ ನೆರವಿಗೆ ಬರುವ ಬದಲು ಅನ್ನ ಬೆಳೆಯುವ ಭೂಮಿಯನ್ನು ವಶಕ್ಕೆ ಪಡೆದು ಟನ್‌ಶಿಪ್ ಮಾಡಲು ಮುಂದಾಗಿವೆ. ಇದರಿಂದ ರೈತ ಸಂಕುಲ ಸಂಕಷ್ಟದಲ್ಲಿದೆ. ಸಾವಯವ ಪದ್ಧತಿ ಅನುಸರಿಸುವ ಮೂಲಕ ಇವೆಲ್ಲಕ್ಕೂ ಪರಿಹಾರವಿದ್ದು ಪ್ರತಿಯೊಬ್ಬರೂ ತಮ್ಮ ಬಳಕೆಗೆ ಅಗತ್ಯವಾದ ಪ್ರಮಾಣದಲ್ಲಿನ ಹಣ್ಣು, ತರಕಾರಿಗಳನ್ನು ಬೆಳೆದುಕೊಳ್ಳುವಂತಾಗಬೇಕು. ತಮ್ಮ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸುವಂತಾದರೆ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಳೆದೊರಕುವ ಜತೆಗೆ ಆರ್ಥಿಕ ಸದೃಢತೆ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘಟನೆಯು ತನ್ನ ಸದಸ್ಯರಿಗೆ ಅಗತ್ಯ ನೆರವು ನೀಡುವ ಜತೆಗೆ ಹೆಚ್ಚುವರಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲಿದೆ ಎಂದು ಹೇಳಿದರು.